ನವದೆಹಲಿ: ಕಳೆದ ಅವಧಿಯಲ್ಲಿ ಯಾವ ಬೆಳೆ ಹೆಚ್ಚು ಮತ್ತು ಯಾವ ಬೆಳೆ ಕಡಿಮೆ ಆಗಿದೆ ಎಂಬ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. 2023-24ರಲ್ಲಿ ದೇಶದಲ್ಲಿ ತರಕಾರಿ ಉತ್ಪಾದನೆಗಿಂತ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಿದೆ. ತರಕಾರಿಗಳ ಕುಸಿತ ಕಂಡಿದೆ ಎಂದು ಕೃಷಿ ಸಚಿವಾಲಯದ 2023-24ರ ಎರಡನೇ ಮುಂಗಡ ಅಂದಾಜು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರೆ ಸರ್ಕಾರಿ ಮೂಲಗಳಿಂದ ಈ ಅಂಕಿ ಅಂಶವನ್ನು ಸಂಗ್ರಹಿಸಲಾಗಿದೆ. ತರಕಾರಿ ಉತ್ಪಾದನೆಯಲ್ಲಿ ಅದರಲ್ಲೂ ಈರುಳ್ಳಿ ಮತ್ತು ಆಲೂಗಡ್ಡೆಯ ಇಳುವರಿ ಇಳಿಕೆಯಲ್ಲಿ ಹವಾಮಾನದ ಅಂಶಗಳು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ದೇಶದ ತೋಟಗಾರಿಕೆ ಉತ್ಪಾದನೆಯಲ್ಲಿ 2023-24ರಲ್ಲಿ 352.23 ಮಿಲಿಯನ್ ಟನ್ ಅಂದಾಜಿಸಲಾಗಿದೆ. ಇದು 2022-23ರಲ್ಲಿ ಅಂತಿಮ ಅಂದಾಜಿನ ಪ್ರಮಾಣದಲ್ಲಿ 32.51 ಲಕ್ಷ ಟನ್ ಇಳಿಕೆಯನ್ನು ಸೂಚಿಸಿದೆ.
ಹಣ್ಣು, ಜೇನು, ಹೂವು, ತೋಟಗಾರಿಕೆ ಬೆಳೆಗಳು, ಮಸಾಲೆ, ಸುವಾಸನೆ ಮತ್ತು ಔಷಧಿ ಸಸ್ಯಗಳ ಉತ್ಪಾದನೆ ಹೆಚ್ಚಾಗಿದ್ದು, ಇವುಗಳಿಗೆ ಹೋಲಿಕೆ ಮಾಡಿದಾಗ ತರಕಾರಿಗಳನ್ನು ಕಡಿಮೆ ಮಟ್ಟದಲ್ಲಿ ಬೆಳೆಯಲಾಗಿದೆ.
ಹಣ್ಣುಗಳ ಉತ್ಪಾದನೆಯು 112.63 ಮಿಲಿಯನ್ ಟನ್ಗಳಿಗೆ ಮುಟ್ಟುವ ನಿರೀಕ್ಷೆ ಇದೆ. ಅದರಲ್ಲೂ ಬಾಳೆ ಹಣ್ಣು, ನಿಂಬೆ, ಮಾವು ಮತ್ತು ದ್ರಾಕ್ಷಿ ಬೆಳೆ ಹೆಚ್ಚಳ ಕಂಡಿದೆ. ಮತ್ತೊಂದೆಡೆ 2022-23ಕ್ಕೆ ಹೋಲಿಕೆ ಮಾಡಿದಾಗ ಸೇಬು ಮತ್ತು ದಾಳಿಂಬೆ ಉತ್ಪಾದನೆ ಕಡಿಮೆಯಾಗಿದೆ.