ಕರ್ನಾಟಕ

karnataka

ETV Bharat / business

ಅದಾನಿ ಸಮೂಹ ಷೇರುಗಳು ಭಾರೀ ಕುಸಿತ: ₹2.45 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ನಷ್ಟ - ADANI STOCKS

ಅಮೆರಿಕದಲ್ಲಿ ಅದಾನಿ ವಿರುದ್ಧ ವಂಚನೆಯ ಆರೋಪ ಹೊರಿಸಿದ ನಂತರ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿವೆ.

ಅದಾನಿ ಸಮೂಹ ಷೇರುಗಳು ಭಾರಿ ಕುಸಿತ
ಅದಾನಿ ಸಮೂಹ ಷೇರುಗಳು ಭಾರಿ ಕುಸಿತ (IANS)

By PTI

Published : Nov 21, 2024, 1:22 PM IST

ನವದೆಹಲಿ:ಗುರುವಾರದ ಬೆಳಗಿನ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಷೇರುಗಳು ಭಾರೀ ಕುಸಿತ ಕಂಡಿವೆ. ಅದಾನಿ ಸಮೂಹದ ಷೇರುಗಳು ಇಂದು ಒಟ್ಟಾರೆಯಾಗಿ 2.50 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟಕ್ಕೀಡಾಗಿವೆ. ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರ ಷರತ್ತುಗಳಿಗೆ ಪ್ರತಿಯಾಗಿ ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡುವ ವರ್ಷಗಳ ಯೋಜನೆಯಲ್ಲಿ ಬಿಲಿಯನೇರ್ ಗೌತಮ್ ಅದಾನಿ ಅವರ ಪಾತ್ರದ ಬಗ್ಗೆ ಯುಎಸ್ ಪ್ರಾಸಿಕ್ಯೂಟರ್​ಗಳು ಆರೋಪ ಹೊರಿಸಿದ ನಂತರ ಅದಾನಿ ಷೇರುಗಳ ಮೌಲ್ಯ ಕುಸಿದಿವೆ.

ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇಕಡಾ 22.99, ಅದಾನಿ ಪೋರ್ಟ್ಸ್ ಶೇಕಡಾ 20, ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡಾ 20, ಅದಾನಿ ಗ್ರೀನ್ ಎನರ್ಜಿ ಶೇಕಡಾ 19.53 ಮತ್ತು ಅದಾನಿ ಟೋಟಲ್ ಗ್ಯಾಸ್ ಶೇಕಡಾ 18.14 ರಷ್ಟು ಕುಸಿದಿವೆ. ಅದಾನಿ ಪವರ್ ಷೇರುಗಳು ಶೇಕಡಾ 17.79, ಅಂಬುಜಾ ಸಿಮೆಂಟ್ಸ್ ಶೇಕಡಾ 17.59, ಎಸಿಸಿ ಶೇಕಡಾ 14.54, ಎನ್ ಡಿಟಿವಿ ಶೇಕಡಾ 14.37 ಮತ್ತು ಅದಾನಿ ವಿಲ್ಮಾರ್ ಶೇಕಡಾ 10 ರಷ್ಟು ಕುಸಿದವು.

ಸಮೂಹದ ಕೆಲ ಕಂಪನಿಯ ಷೇರುಗಳು ದಿನದ ಅತ್ಯಂತ ಕಡಿಮೆ ವ್ಯಾಪಾರ ಅನುಮತಿಯ ಮಿತಿಯನ್ನು ತಲುಪಿದವು. ಎಲ್ಲಾ ಹತ್ತು ಲಿಸ್ಟೆಡ್ ಗ್ರೂಪ್ ಸಂಸ್ಥೆಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣ (ಎಂಸಿಎಪಿ) ಬೆಳಗ್ಗಿನ ವಹಿವಾಟಿನಲ್ಲಿ ವ್ಯವಹಾರಗಳಲ್ಲಿ 2,45,016.51 ಕೋಟಿ ರೂ.ಗಳಷ್ಟು ಕುಸಿದಿದೆ.

ಈಕ್ವಿಟಿ ಮಾರುಕಟ್ಟೆಯಲ್ಲಿ, ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 536.89 ಪಾಯಿಂಟ್ಸ್ ಕುಸಿದು 77,041.49 ರಲ್ಲಿ ವಹಿವಾಟು ನಡೆಸುತ್ತಿದೆ ಮತ್ತು ಎನ್ಎಸ್ಇ ನಿಫ್ಟಿ 186.75 ಪಾಯಿಂಟ್ಸ್ ಕುಸಿದು 23,331.75 ರಲ್ಲಿ ವಹಿವಾಟು ನಡೆಸುತ್ತಿದೆ.

62 ವರ್ಷದ ಅದಾನಿ, ಅವರ ಸೋದರಳಿಯ ಸಾಗರ್ ಮತ್ತು ಇತರ ಪ್ರತಿವಾದಿಗಳು 2020 ಮತ್ತು 2024 ರ ನಡುವೆ ಸೌರ ವಿದ್ಯುತ್ ಟೆಂಡರ್​ಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್​ ಗಳು ಆರೋಪಿಸಿದ್ದಾರೆ. ಈ ಯೋಜನೆಗಾಗಿ ಅದಾನಿ ಗ್ರೂಪ್ ಶತಕೋಟಿ ಡಾಲರ್​ಗಳನ್ನು ಸಂಗ್ರಹಿಸಿದ ಯುಎಸ್ ಬ್ಯಾಂಕುಗಳು ಮತ್ತು ಹೂಡಿಕೆದಾರರಿಂದ ಇದನ್ನು ಮರೆಮಾಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪಗಳ ಬಗ್ಗೆ ಈವರೆಗೆ ಅದಾನಿ ಸಮೂಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

"ಶತಕೋಟಿ ಡಾಲರ್ ಮೌಲ್ಯದ ಟೆಂಡರ್​ಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಪ್ರತಿವಾದಿಗಳು ವಿಸ್ತಾರವಾದ ಯೋಜನೆಯನ್ನು ರೂಪಿಸಿದ್ದಾರೆ" ಎಂದು ಪ್ರಕರಣ ದಾಖಲಿಸಿದ ನ್ಯೂಯಾರ್ಕ್ ಪೂರ್ವ ಜಿಲ್ಲೆಯ ಯುಎಸ್ ಅಟಾರ್ನಿ ಬ್ರಿಯಾನ್ ಪೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದಾನಿ ಗ್ರೂಪ್ ಅಧ್ಯಕ್ಷ ಅದಾನಿ, ಅವರ ಸೋದರಳಿಯ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಸಾಗರ್ ಆರ್ ಅದಾನಿ ಮತ್ತು ಅದರ ಮಾಜಿ ಸಿಇಒ ವಿನೀತ್ ಜೈನ್ ವಿರುದ್ಧ ಸೆಕ್ಯುರಿಟೀಸ್ ವಂಚನೆ, ಸೆಕ್ಯುರಿಟೀಸ್ ವಂಚನೆ ಪಿತೂರಿ ಮತ್ತು ಎಲೆಕ್ಟ್ರಾನಿಕ್ ರೂಪದಲ್ಲಿ ವಂಚನೆ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಕಮಿಷನ್ (ಎಸ್ಇಸಿ) ಸಿವಿಲ್ ಪ್ರಕರಣದಲ್ಲೂ ಅದಾನಿ ವಿರುದ್ಧ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ: 'ಸೌರಶಕ್ತಿ ಯೋಜನೆಯ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ $250 ಮಿಲಿಯನ್‌ ಲಂಚ': ಗೌತಮ್ ಅದಾನಿ ವಿರುದ್ಧ ಗಂಭೀರ ಆರೋಪ

ABOUT THE AUTHOR

...view details