ನವದೆಹಲಿ: ಮೊಬೈಲ್ ಫೋನ್ಗಳ ಸಂಪರ್ಕ ವ್ಯವಸ್ಥೆಗೆ ಅಗತ್ಯವಾದ 5ಜಿ ಸ್ಪೆಕ್ಟ್ರಮ್ ಹರಾಜು ಬುಧವಾರ ಮುಕ್ತಾಯಗೊಂಡಿದ್ದು, ಟೆಲಿಕಾಂ ಸಂಸ್ಥೆಗಳಿಂದ ಸುಮಾರು 11,300 ರೂ.ಗಳ ಬಿಡ್ಗಳು ಸಲ್ಲಿಕೆಯಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 5ಜಿ ತರಂಗಾಂತರಗಳಿಗಾಗಿ 96,000 ಕೋಟಿ ರೂ.ಗಳ ಸ್ಪೆಕ್ಟ್ರಮ್ ಹರಾಜು ಮಂಗಳವಾರ ಪ್ರಾರಂಭವಾಗಿದ್ದು, ಇದು ಎಂಟು ಬ್ಯಾಂಡ್‌ಗಳನ್ನು ಒಳಗೊಂಡಿದೆ. ಒಟ್ಟು 10 ಗಿಗಾಹರ್ಟ್ಸ್ ರೇಡಿಯೋ ತರಂಗಗಳು ಖರೀದಿಗೆ ಲಭ್ಯವಿದ್ದು, ಇದು 800 ಮೆಗಾಹರ್ಟ್ಸ್‌ನಿಂದ 26 ಗಿಗಾಹರ್ಟ್ಸ್ ಆವರ್ತನಗಳನ್ನು (Frequencies) ಒಳಗೊಂಡಿದೆ.
ಏಳು ಸುತ್ತುಗಳಲ್ಲಿ ಮುಕ್ತಾಯಗೊಂಡ 96,000 ಕೋಟಿ ರೂ.ಗಳ 5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್ ಅತಿದೊಡ್ಡ ಬಿಡ್ದಾರನಾಗಿ ಹೊರಹೊಮ್ಮಿದೆ. ಭಾರ್ತಿ ಏರ್‌ಟೆಲ್ 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಮತ್ತು 2100 ಮೆಗಾಹರ್ಟ್ಸ್ ಬ್ಯಾಂಡ್ಗಳಲ್ಲಿ ತರಂಗಾಂತರಗಳನ್ನು ಪಡೆದುಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಹರಾಜಿನಲ್ಲಿ ರಿಲಯನ್ಸ್ ಜಿಯೋ ಭಾಗವಹಿಸುವಿಕೆ ಸೀಮಿತವಾಗಿತ್ತು. ಜಿಯೋ ಬಹುಶಃ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 5ಜಿ ಬ್ಯಾಂಡ್ ವಿಡ್ತ್ ಅನ್ನು ಖರೀದಿಸಬಹುದು. ವೊಡಾಫೋನ್ ಐಡಿಯಾ (ವಿ) 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಮತ್ತು 2500 ಮೆಗಾಹರ್ಟ್ಸ್ ಬ್ಯಾಂಡ್ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಬಿಡ್ ಮಾಡಿದೆ ಎಂದು ತಿಳಿದು ಬಂದಿದೆ.