ಬೆಂಗಳೂರು: ಭಾರತೀಯ ದಂಡ ಸಂಹಿತೆ (ಐಪಿಸಿ) ಅಧ್ಯಯನ ಮಾಡಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಪಠ್ಯ ಕ್ರಮದಲ್ಲಿ ಪರೀಕ್ಷೆ ನಡೆಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಜೊತೆಗೆ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಐಪಿಸಿ ಪಠ್ಯಕ್ರಮದಡಿಯಲ್ಲಿ ಪರೀಕ್ಷೆ ನಡೆಸಲು ಸೂಚನೆ ನೀಡಿದೆ.
ಐಪಿಸಿ (ಕ್ರಿಮಿನಲ್ ಲಾ-1) ಅಧ್ಯಯನ ಮಾಡಿ ಅನುತ್ತೀರ್ಣರಾದ ಕಾನೂನು ವಿದ್ಯಾರ್ಥಿಗಳಿಗೂ ಬಿಎನ್‌ಎಸ್ ಪಠ್ಯ ಕ್ರಮದಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಕೆಎಸ್‌ಎಲ್‌ಯು ಡಿಸೆಂಬರ್ 6 ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಚ್ಚಿನ್ ಮತ್ತಿತರ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಕೆಎಸ್‌ಎಲ್‌ಯು ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸಿ ಆದೇಶಿಸಿದ್ದು, ಐಪಿಸಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಬಿಎನ್‌ಎಸ್ ಪಠ್ಯಕ್ರಮದ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ.
ಅಲ್ಲದೆ, ಬಿಎನ್‌ಎಸ್ ಪಠ್ಯಕ್ರಮ ಜಾರಿಯಾದ ವರ್ಷ ಮತ್ತು ಅದರ ಮುಂದಿನ ವರ್ಷಗಳಲ್ಲಿ ಬಿಎನ್‌ಎಸ್ ಪಠ್ಯಕ್ರಮದಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಬಹುದು. ಆದರೆ, ಐಪಿಸಿ ಅಧ್ಯಯನ ಮಾಡಿ, ಅದೇ ಪಠ್ಯಕ್ರಮ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಿಎನ್‌ಎಸ್ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂಬುದನ್ನು ನಿರೀಕ್ಷಿಸಲಾಗದು. ಜೊತೆಗೆ, ಐಪಿಸಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಬಿಎನ್‌ಎಸ್ ಪರೀಕ್ಷೆ ಬರೆಯುವಂತೆ ಒತ್ತಾಯಿಸಬಾರದು ಎಂದು ಪೀಠ ಕೆಎಸ್‌ಎಲ್‌ಯುಗೆ ಸಲಹೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪವನ್ ಚಂದ್ರಶೆಟ್ಟಿ, ಅರ್ಜಿದಾರ ವಿದ್ಯಾರ್ಥಿಗಳು ಕಾನೂನು ಪದವಿಯಲ್ಲಿ ಐಪಿಸಿ ಪಠ್ಯ ಕ್ರಮವನ್ನು ಅಧ್ಯಯನ ಮಾಡಿದ್ದಾರೆ. ಬಿಎನ್‌ಎಸ್ ಪಠ್ಯ ಕ್ರಮದ ಕುರಿತು ಯಾವುದೇ ಅಧ್ಯಯನ ನಡೆಸಿಲ್ಲ. ಆದರೆ, ಕೆಎಸ್‌ಎಲ್‌ಯು ಬಿಎನ್‌ಎಸ್ ಪಠ್ಯಕ್ರಮದಲ್ಲಿ ಪರೀಕ್ಷೆಗಳನ್ನು ಬರೆಯಲು ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಪರೀಕ್ಷೆಗೆ ಹಾಜರಾಗುವುದಕ್ಕೆ ಸಾಧ್ಯವಾಗದಂತಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ವಿಶ್ವವಿದ್ಯಾಲಯದ ಪರ ವಕೀಲರು, ಪ್ರಸ್ತುತ ದೇಶದಲ್ಲಿ ಐಪಿಸಿ ಕಾಯ್ದೆ ರದ್ದಾಗಿ ಬಿಎನ್‌ಎಸ್ ಜಾರಿಗೆ ಬಂದಿದೆ. ಆದ್ದರಿಂದ ರದ್ದಾಗಿರುವ ವಿಷಯದ ಪಠ್ಯ ಕ್ರಮದಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಕೆಎಸ್‌ಎಲ್‌ಯು ಪರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಐಪಿಸಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಐಪಿಸಿ ಪಠ್ಯಕ್ರಮದಲ್ಲಿ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿ ಆದೇಶಿಸಿದೆ.
ಇದನ್ನೂ ಓದಿ: ಸ್ವಂತ ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ: ಸ್ವಗ್ರಾಮಕ್ಕೆ ತೆರಳುವಾಗ ಇಡೀ ಕುಟುಂಬ ದುರಂತ ಅಂತ್ಯ