ಕರ್ನಾಟಕ

karnataka

ETV Bharat / business

ಭಾರತದಲ್ಲಿ 3.40 ಕೋಟಿ ಸ್ಮಾರ್ಟ್​ಫೋನ್ ಮಾರಾಟ: ಶೇ 11.5ರಷ್ಟು ಬೆಳವಣಿಗೆ - INDIAN SMARTPHONE MARKET

ಪ್ರಥಮ ತ್ರೈಮಾಸಿಕದಲ್ಲಿ ಭಾರತದಲ್ಲಿ 3.40 ಕೋಟಿ ಸ್ಮಾರ್ಟ್​ಫೋನ್​ಗಳು ಮಾರಾಟವಾಗಿವೆ.

ಭಾರತದಲ್ಲಿ 3.40 ಕೋಟಿ ಸ್ಮಾರ್ಟ್​ಫೋನ್ ಮಾರಾಟ
ಭಾರತದಲ್ಲಿ 3.40 ಕೋಟಿ ಸ್ಮಾರ್ಟ್​ಫೋನ್ ಮಾರಾಟ (ians)

By ETV Bharat Karnataka Team

Published : May 14, 2024, 2:53 PM IST

ನವದೆಹಲಿ: ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆ ಶೇಕಡಾ 11.5 ರಷ್ಟು (ವರ್ಷದಿಂದ ವರ್ಷಕ್ಕೆ) ಬೆಳವಣಿಗೆ ದಾಖಲಿಸಿದ್ದು, ಈ ಅವಧಿಯಲ್ಲಿ 34 ಮಿಲಿಯನ್ (3.40 ಕೋಟಿ) ಸ್ಮಾರ್ಟ್​ಪೋನ್​ಗಳು ಮಾರಾಟವಾಗಿವೆ. ಈ ಪೈಕಿ ಆ್ಯಪಲ್ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ ಶೇಕಡಾ 19 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ವರದಿಯೊಂದು ಮಂಗಳವಾರ ತೋರಿಸಿದೆ. ಐಡಿಸಿ ಪ್ರಕಾರ, ಪ್ರೀಮಿಯಂ ಸ್ಮಾರ್ಟ್​ಫೋನ್​ಗಳು ಒಟ್ಟಾರೆ ಮಾರುಕಟ್ಟೆಯಲ್ಲಿ ಶೇಕಡಾ 2 ರಷ್ಟು ಪಾಲು ಹೊಂದಿದ್ದು, ಸಂಖ್ಯೆಗಳ ಆಧಾರದಲ್ಲಿ ಇವುಗಳ ಮಾರಾಟ ಶೇಕಡಾ 21 ರಷ್ಟು ಕುಸಿದಿದೆ.

"ಈ ತ್ರೈಮಾಸಿಕದಲ್ಲಿ ಅನೇಕ ಬೆಲೆ ಶ್ರೇಣಿಗಳ ಹಲವಾರು ಹೊಸ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗಿವೆ. ಪ್ರೀಮಿಯಂ ಆಫರ್​ಗಳೊಂದಿಗೆ ಹೆಚ್ಚಿನ ಪ್ರಚಾರವನ್ನೂ ಕಂಪನಿಗಳು ಕೈಗೊಂಡಿವೆ. ಜನ ಸುಲಭವಾಗಿ ಹೊಸ ಸ್ಮಾರ್ಟ್​ಫೋನ್ ಕೊಳ್ಳಲು ಸಾಧ್ಯವಾಗುವಂತೆ ಮೊಬೈಲ್ ಕಂಪನಿಗಳು ಮೈಕ್ರೋ ಫೈನಾನ್ಸಿಂಗ್ ಮೂಲಕ ಸಾಲದ ಸೌಲಭ್ಯಗಳನ್ನು ಕೂಡ ಹೆಚ್ಚಿಸಿವೆ" ಎಂದು ಐಡಿಸಿ ಇಂಡಿಯಾದ ಕ್ಲೈಂಟ್ ಡಿವೈಸಸ್ ವಿಭಾಗದ ಹಿರಿಯ ಸಂಶೋಧನಾ ವ್ಯವಸ್ಥಾಪಕಿ ಉಪಾಸನಾ ಜೋಶಿ ಹೇಳಿದ್ದಾರೆ.

ಬೆಲೆಗಳಲ್ಲಿ ರಿಯಾಯಿತಿ, ಇ - ಟೈಲರ್ ಪ್ಲಾಟ್​ಫಾರ್ಮ್​ಗಳಲ್ಲಿ ವಿಶೇಷ ಆಫರ್​ಗಳು ಮತ್ತು ಆಕರ್ಷಕ ಸಾಲ ಸೌಲಭ್ಯಗಳ ಮೂಲಕ ಹಬ್ಬದ ಋತುವಿನ ನಂತರವೂ ಆ್ಯಪಲ್​ ಭಾರತದಲ್ಲಿ ಸ್ಥಿರವಾದ ಮಾರುಕಟ್ಟೆ ಬೆಳವಣಿಗೆ ಸಾಧಿಸಿದೆ. ದೇಶದಲ್ಲಿ ಒಟ್ಟಾರೆ ಐಫೋನ್​ಗಳ ಮಾರಾಟದಲ್ಲಿ ಐಫೋನ್ 14 ಮತ್ತು 15 ಗಳ ಪಾಲು ಶೇಕಡಾ 56 ರಷ್ಟಿದೆ. ಜೊತೆಗೆ ಕಂಪನಿಯು ಭಾರತದಲ್ಲಿ ತನ್ನ ಫೋನ್​ಗಳ ಉತ್ಪಾದನೆ ದ್ವಿಗುಣಗೊಳಿಸಿರುವುದು ಗಮನಾರ್ಹ.

ಬಹುತೇಕ ಜನಸಂಖ್ಯೆಯ ಬಜೆಟ್​ಗೆ ಸರಿಹೊಂದುವ ಸ್ಮಾರ್ಟ್​ ಫೋನ್​ಗಳ ಮಾರಾಟ ಶೇಕಡಾ 22 ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದ್ದ ಶೇಕಡಾ 44 ರಿಂದ ಶೇಕಡಾ 48 ಕ್ಕೆ ತಲುಪಿದೆ. ಬಜೆಟ್​ ವಿಭಾಗದಲ್ಲಿ ವಿವೋ, ಶಿಯೋಮಿ ಮತ್ತು ಸ್ಯಾಮ್ ಸಂಗ್ ಮೊದಲ ಮೂರು ಸ್ಥಾನದಲ್ಲಿದ್ದು, ಒಟ್ಟಾರೆಯಾಗಿ ಈ ವಿಭಾಗದಲ್ಲಿ ಶೇಕಡಾ 53 ರಷ್ಟು ಪಾಲು ಹೊಂದಿವೆ ಎಂದು ವರದಿ ತಿಳಿಸಿದೆ. ಈ ತ್ರೈಮಾಸಿಕದಲ್ಲಿ ಸುಮಾರು 23 ಮಿಲಿಯನ್ 5 ಜಿ ಸ್ಮಾರ್ಟ್​ಫೋನ್​ಗಳು ಮಾರಾಟವಾಗಿದ್ದು, 5 ಜಿ ಸಾಧನಗಳ ಪಾಲು ಶೇಕಡಾ 69 ಕ್ಕೆ ಏರಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದರ ಪಾಲು ಶೇಕಡಾ 46 ರಷ್ಟಿತ್ತು.

ಇದನ್ನೂ ಓದಿ : ಏಪ್ರಿಲ್​ನಲ್ಲಿ 12 ತಿಂಗಳ ಗರಿಷ್ಠ ಮಟ್ಟದಲ್ಲಿ ಸಗಟು ಹಣದುಬ್ಬರ: ಶೇ 1.26ಕ್ಕೆ ಏರಿಕೆ - Wholesale Price Inflation

ABOUT THE AUTHOR

...view details