ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವು ರಾಜ್ಯಸಭಾ ಸಂಸದ ಮಿಲಿಂದ್ ದಿಯೋರಾ ಅವರನ್ನು ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿಸಲಿದೆ. ಇವರು ಈ ಕ್ಷೇತ್ರದಲ್ಲಿ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ವಿರುದ್ಧ ಸೆಣಸಲಿದ್ದಾರೆ. ಆದಿತ್ಯ ಈಗಾಗಲೇ ವರ್ಲಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮಿಲಿಂದ್ ದಿಯೋರಾ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರು ದಕ್ಷಿಣ ಮುಂಬೈನಿಂದ ಮೂರು ಬಾರಿ ಸಂಸದರಾಗಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ವರ್ಲಿ ಕ್ಷೇತ್ರದ ಉಸ್ತುವಾರಿಯನ್ನು ದಿಯೋರಾ ಅವರಿಗೆ ನೀಡಲಾಗಿತ್ತು. ಇದು ಆದಿತ್ಯ ಪ್ರತಿನಿಧಿಸುವ ಕ್ಷೇತ್ರವಾಗಿದ್ದರೂ, ವರ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯುಬಿಟಿಗೆ ಕೇವಲ 6500 ಮತಗಳ ಮುನ್ನಡೆ ಸಿಕ್ಕಿತ್ತು. ಇನ್ನು ಎಂಎನ್ಎಸ್ ಈ ಕ್ಷೇತ್ರದಲ್ಲಿ ಸಂದೀಪ್ ದೇಶಪಾಂಡೆ ಅವರನ್ನು ಕಣಕ್ಕಿಳಿಸಿದೆ.
ಜನರು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ- ಆದಿತ್ಯ:ಶಿವಸೇನೆ (ಯುಬಿಟಿ) ಬಣದ ನಾಯಕ ಆದಿತ್ಯ ಠಾಕ್ರೆ ಗುರುವಾರ ವರ್ಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮೊದಲು ಎಎನ್ಐ ಜೊತೆ ಮಾತನಾಡಿದ ಆದಿತ್ಯ ಠಾಕ್ರೆ, ಜನರು ನನ್ನನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
"ನಾವು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಜನರು ನನ್ನನ್ನು ಆಶೀರ್ವದಿಸುತ್ತಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಇಲ್ಲಿ ಕಾಣುತ್ತಿರುವಂತೆ ವಾತಾವರಣವು ತುಂಬಾ ಉತ್ತಮವಾಗಿದೆ. ಜನರು ನನಗೆ ನೀಡುತ್ತಿರುವ ಪ್ರೀತಿ ದೊಡ್ಡದು, ಜನರ ಪ್ರೀತಿಯೊಂದಿಗೆ ನಾನು ನಾಮಪತ್ರ ಸಲ್ಲಿಸುತ್ತೇನೆ" ಎಂದು ಅವರು ಎಎನ್ಐಗೆ ತಿಳಿಸಿದರು.
ಗೆಲುವಿಗಾಗಿ ಎರಡೂ ಕೂಟಗಳಿಂದ ತೀವ್ರ ಕಸರತ್ತು ಆರಂಭ:ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಮತ್ತು ಶಿವಸೇನೆ (ಯುಬಿಟಿ), ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ಕಾಂಗ್ರೆಸ್ ಒಳಗೊಂಡ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಎರಡೂ ರಾಜ್ಯದ 288 ವಿಧಾನಸಭಾ ಸ್ಥಾನಗಳಿಗೆ ಮುಂಬರುವ ಚುನಾವಣೆಗೆ ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಯೊಂದಿಗೆ ಬಿಜೆಪಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನವೆಂಬರ್ 20 ರಂದು ನಡೆಯಲಿದ್ದು, ಎಲ್ಲ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದ್ದವು. 2014ರಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಸ್ಥಾನಗಳನ್ನು ಗಳಿಸಿದ್ದವು.
ಇದನ್ನೂ ಓದಿ : 80 ದಾಟಿದ ಕೇಂದ್ರದ ಪೆನ್ಷನ್ದಾರರಿಗೆ ಹೆಚ್ಚುವರಿ ಅನುಕಂಪದ ಪಿಂಚಣಿ ಜಾರಿ