ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿಂದು ಮೊದಲ ಧಾರ್ಮಿಕ ಸ್ನಾನ ಅಥವಾ 'ಶಾಹಿ ಸ್ನಾನ'ದೊಂದಿಗೆ 45 ದಿನಗಳ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ 'ಮಹಾಕುಂಭ ಮೇಳ-2025' ಶುಭಾರಂಭಗೊಂಡಿತು. ಪವಿತ್ರ ಮಹಾಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಉತ್ತರ ಪ್ರದೇಶ ಸರ್ಕಾರದ ಪ್ರಕಾರ, 35 ಕೋಟಿಗೂ ಹೆಚ್ಚು ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸುವ ನಿರೀಕ್ಷೆ ಇದೆ.
ಮಹಾಕುಂಭ ಮೇಳ ಅಧಿಕೃತವಾಗಿ ಶುರುವಾಗುವ ಮುನ್ನವೇ ಶನಿವಾರ ಮತ್ತು ಭಾನುವಾರ ಲಕ್ಷಾಂತರ ಹೆಚ್ಚು ಜನರು ಪವಿತ್ರ ಸ್ನಾನದಲ್ಲಿ ಪಾಲ್ಗೊಂಡಿರುವುದು ಸರ್ಕಾರ ನಿರೀಕ್ಷೆಯನ್ನು ಸಾಬೀತುಪಡಿಸುವಂತಿದೆ.
ಧಾರ್ಮಿಕತೆ, ಆಧ್ಯಾತ್ಮಿಕತೆ ಮತ್ತು ಕೃತಕ ಬುದ್ಧಿಮತ್ತೆ(AI)ಯ ಆಧುನಿಕತೆಯ ಸ್ಪರ್ಶದೊಂದಿಗೆ ಪ್ರಸಕ್ತ ಸಾಲಿನ ಮಹಾ ಕುಂಭ ಮೇಳ 'ಡಿಜಿ ಕುಂಭ'ವಾಗಿಯೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್ ಸಕಲ ರೀತಿಯಲ್ಲೂ ಸಜ್ಜಾಗಿದೆ. ದೇಶದ ನಾನಾ ಕಡೆಗಳಿಂದ ಆಗಮಿಸುವ ಸಾಧುಗಳು, ಸ್ವಾಮೀಜಿಗಳು ಮತ್ತು ಜಗತ್ತಿನೆಲ್ಲೆಡೆಯಿಂದ ಆಗಮಿಸುವ ಯಾತ್ರಿಕರನ್ನು ಬರಮಾಡಿಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆಗಳಾಗಿವೆ. ಈಗಾಗಲೇ ಹಲವರು ಪ್ರಯಾಗ್‌ರಾಜ್ ಬಂದು ಸೇರಿದ್ದಾರೆ.
ಭಾರತದ ಪುರಾತನ ಸಾಂಸ್ಕೃತಿಕ, ಧಾರ್ಮಿಕ ಸಂಪ್ರದಾಯಗಳನ್ನು ಮಹಾಕುಂಭ ಮೇಳ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚಿಗೆ ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು. ತಮ್ಮ ಪುರಾತನ ಸಂಪ್ರದಾಯಗಳು ಹಾಗು ಸಾಂಸ್ಕೃತಿಕ ಬೇರುಗಳ ಜೊತೆಗೆ ಮರು ಸಂಬಂಧ ಬೆಳೆಸಲು ಮಹಾಕುಂಭ ಮೇಳ ಜಗತ್ತಿನಾದ್ಯಂತದ ಜನರಿಗೆ ಅವಕಾಶ ಮಾಡಿಕೊಡುತ್ತದೆ. ಈ ಸಾಲಿನ ಮಹಾಕುಂಭ ಅದ್ಧೂರಿ, ದೈವಿಕತೆ ಮತ್ತು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿ ಮೇಳೈಸಲಿದೆ.
ಮಹಾಕುಂಭ ಮೇಳದ ಹೈಲೈಟ್ಸ್:
- 35 ಕೋಟಿ ಭಕ್ತರ ಆಗಮನ ನಿರೀಕ್ಷೆ- ಇದು ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ
- Scan ಮಾಡಿ ಮಾಹಿತಿ ತಿಳಿಯಿರಿ- ಭಕ್ತರು ವಿವಿಧ ಕಾರ್ಯಕ್ರಮಗಳ ವಿವರ ತಿಳಿಯಲು 50 ಸಾವಿರ QR ಕೋಡ್‌ಗಳ ರಚನೆ
- ಅಭೂತಪೂರ್ವ ಭದ್ರತೆ- 24 ಗಂಟೆಗಳ ಕಾಲ ನೀರೊಳಗಿನಿಂದ ಡ್ರೋಣ್‌ಗಳಿಂದ ನಿರಂತರ ಕಣ್ಗಾವಲು
- ಪಿಎಸಿ, ಎನ್‌ಡಿಆರ್‌ಎಫ್, ಎಟಿಎಸ್, ಎನ್ಎಸ್‌ಜಿ ಸೇರಿ 45 ಸಾವಿರಕ್ಕೂ ಅಧಿಕಾ ಭದ್ರತಾ ಸಿಬ್ಬಂದಿಯ ನಿಯೋಜನೆ
- 3,000ಕ್ಕೂ ಹೆಚ್ಚು ಕ್ಯಾಮೆರಾಗಳ ಅಳವಡಿಕೆ
- 1.5 ಲಕ್ಷಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ
- ಭದ್ರತೆಯಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳ (AI) ಪರಿಣಾಮಕಾರಿ ಬಳಕೆ
- ಸಂಗಮದಲ್ಲಿ ಭಕ್ತರ ಓಡಾಟಕ್ಕೆ 30 ಪಾಂಟೂನ್ ಸೇತುವೆಗಳ ನಿರ್ಮಾಣ