ಇಂದು ವಿಶ್ವ ಫೋಟೋಗ್ರಫಿ ದಿನ. ಜಾಗತಿಕವಾಗಿ ಈ ದಿನವನ್ನು 'ವಿಶ್ವ ಫೋಟೋ ದಿನ'ವಾಗಿ ಆಚರಿಸಲಾಗುತ್ತದೆ. ಇಂದು ಜಾಗತಿನೆಲ್ಲೆಡೆ ಫೋಟೋಗ್ರಫಿ ಕುರಿತು ಚರ್ಚೆ ಮತ್ತು ಅದನ್ನು ಹವ್ಯಾಸ ಮತ್ತು ವೃತ್ತಿಯಾಗಿ ಸ್ವೀಕರಿಸುವ ಉದ್ದೇಶ ಹೊಂದಿರುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಕೌಶಲ್ಯದ ಮೂಲಕ ಜಗತ್ತಿಗೆ ಸ್ಪೂರ್ತಿ ನೀಡಿದ ಅಗ್ರಮಾನ್ಯರ ಕೊಡುಗೆಯನ್ನೂ ಸ್ಮರಿಸಲಾಗುವುದು.
ಇತಿಹಾಸ:2010ರ ಆಗಸ್ಟ್ 19ರಂದು ವಿಶ್ವ ಫೋಟೋಗ್ರಫಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಈ ದಿನದಂದು ಜಾಗತಿಕ ಆನ್ಲೈನ್ ಗ್ಯಾಲರಿಯಲ್ಲಿ ಸುಮಾರು 270 ಛಾಯಾಚಿತ್ರಗ್ರಾಹಕರು ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. 100 ದೇಶಗಳು ಆನ್ಲೈನ್ ಗ್ಯಾಲರಿ ಪ್ರವೇಶ ಮಾಡಿದ್ದವು. ಹೀಗೆ ಮೊದಲ ಬಾರಿಗೆ ಅಧಿಕೃತವಾಗಿ ವಿಶ್ವ ಫೋಟೋಗ್ರಫಿ ಶುರುವಾಯಿತು. ಆಗಸ್ಟ್ 19, 1839ರಂದು ಫ್ರಾನ್ಸ್ ಸರ್ಕಾರ ಡಾಗುರೋಟೈಪ್ ಪ್ರೊಸೆಸ್ಗೆ ಪೇಟೆಂಟ್ ಖರೀದಿಸಿತು. ಇದು ಜಗತ್ತಿಗೆ ಉಚಿತ ಉಡುಗೊರೆ ಎಂದು ಫ್ರಾನ್ಸ್ ಸರ್ಕಾರ ತಿಳಿಸಿತು.
ಉದ್ದೇಶ:ಕಲೆ, ವಿಜ್ಞಾನ, ಪತ್ರಿಕೋದ್ಯಮ ಮತ್ತು ವೈಯಕ್ತಿಕ ಅಭಿವ್ಯಕ್ತಿಯ ನೆಲೆಯಲ್ಲಿ ಫೋಟೋಗ್ರಫಿ ಪ್ರಭಾವ ಬೀರುತ್ತದೆ. ಛಾಯಾಗ್ರಾಹಕರು ಮತ್ತು ಉತ್ಸಾಹಿಗಳು ಒಟ್ಟು ಸೇರಲು ಮತ್ತು ಅವರ ಉತ್ಸಾಹವನ್ನು ಹಂಚಿಕೊಳ್ಳಲು, ಕೆಲಸವನ್ನು ಪ್ರದರ್ಶಿಸಲು, ಫೋಟೋಗಳಿಗೆ ಮೆಚ್ಚುಗೆ ನೀಡಲು ಇದು ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕೌಶಲ್ಯ ಅಥವಾ ಅನುಭವದ ಹೊರತಾಗಿ, ಛಾಯಾಚಿತ್ರಗಳನ್ನು ಹಂಚಿಕೊಳ್ಳುವುದನ್ನು ಈ ದಿನ ಉತ್ತೇಜಿಸುತ್ತದೆ.
ಧ್ಯೇಯ: ಜಾಗತಿಕವಾಗಿ ಎಲ್ಲಾ ವಿಧದ ಛಾಯಚಿತ್ರಗಳನ್ನು ಇಂದು ಆಚರಿಸಲಾಗುತ್ತದೆ. ಈ ಬಾರಿಯ ಧ್ಯೇಯ 'ಸಂಪೂರ್ಣ ದಿನ'.