ನವದೆಹಲಿ : "ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಈಗ ಅಧಿಕಾರದಲ್ಲಿ ಇದ್ದಿದ್ದರೆ, ನೀವು ದುಡಿಯುವ 12 ಲಕ್ಷ ರೂಪಾಯಿಗಳಲ್ಲಿ 10 ಲಕ್ಷ ರೂ. ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದರು. ಜವಾಹರ್ಲಾಲ್ ನೆಹರೂ ಅವಧಿಯಲ್ಲಿ ಇಷ್ಟೇ ಮೊತ್ತದಲ್ಲಿ ಒಂದು ಪಾಲು ಮಾತ್ರ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಿತ್ತು. ನಮ್ಮ ಸರ್ಕಾರವು 12 ಲಕ್ಷಕ್ಕೆ ತೆರಿಗೆ ಮುಕ್ತ ಮಾಡಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿ, ಕೇಂದ್ರ ಬಜೆಟ್ ಅನ್ನು ನೀರಸ ಎಂದು ಟೀಕಿಸಿದ ಕಾಂಗ್ರೆಸ್ಗೆ ಅವರು ತಿರುಗೇಟು ನೀಡಿದರು. "ಹಿಂದಿನ (ಕಾಂಗ್ರೆಸ್) ಸರ್ಕಾರಗಳು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಜನರ ಮೇಲೆ ವಿಪರೀತ ತೆರಿಗೆ ವಿಧಿಸುತ್ತಿದ್ದವು. ಆದರೆ, ಬಿಜೆಪಿ ಸರ್ಕಾರವು ಜನಸಾಮಾನ್ಯರಿಗಾಗಿ ಸರ್ಕಾರದ ಖಜಾನೆಯನ್ನು ತೆರೆದಿದೆ" ಎಂದರು.
"ಮಧ್ಯಮ ವರ್ಗಕ್ಕೆ ಗೌರವ ನೀಡುವ ಮತ್ತು ಪ್ರಾಮಾಣಿಕ ತೆರಿಗೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಏಕೈಕ ಪಕ್ಷ ಬಿಜೆಪಿ ಎಂದು ಬಣ್ಣಿಸಿದ ಪ್ರಧಾನಿ, ನೆಹರೂ ಅವರ ಕಾಲದಲ್ಲಿ ಜನರು ದುಡಿದ ದುಡ್ಡಿನ ನಾಲ್ಕು ಭಾಗದಲ್ಲಿ ಒಂದು ಭಾಗವನ್ನು ಸರ್ಕಾರ ಕಿತ್ತುಕೊಳ್ಳುತ್ತಿತ್ತು. ಒಂದು ವೇಳೆ, ಇಂದಿರಾ ಗಾಂಧಿ ಅವರು ಈಗ ಅಧಿಕಾರದಲ್ಲಿ ಇದ್ದಿದ್ದರೆ, 12 ಲಕ್ಷ ರೂ.ಗಳಲ್ಲಿ 10 ಲಕ್ಷ ರೂ. ತೆರಿಗೆ ವಿಧಿಸುತ್ತಿದ್ದರು" ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
"ನಮ್ಮ ಸರ್ಕಾರವು ಮಂಡಿಸಿದ ಬಜೆಟ್ನಿಂದ ದೇಶದ ಇಡೀ ಮಧ್ಯಮ ವರ್ಗವೇ ಖುಷಿಪಟ್ಟಿದೆ. ಭಾರತದ ಇತಿಹಾಸದಲ್ಲಿಯೇ 'ಮಧ್ಯಮ ವರ್ಗದ ಸ್ನೇಹಿ ಬಜೆಟ್' ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ. ಜನರು ದುಡಿಯುವ 12 ಲಕ್ಷ ರೂಪಾಯಿವರೆಗೆ ತೆರಿಗೆ ಮುಕ್ತಗೊಳಿಸಿದ್ದು, ಸ್ವಾತಂತ್ರ್ಯದ ನಂತರ ಇದೇ ಮೊದಲು" ಎಂದು ಬಣ್ಣಿಸಿದರು.
"11 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ 12 ಲಕ್ಷ ರೂಪಾಯಿಗೆ 2.60 ಲಕ್ಷ ರೂಪಾಯಿ ತೆರಿಗೆ ವಿಧಿಸುತ್ತಿತ್ತು. ತೆರಿಗೆಯು ಖಜಾನೆ ತುಂಬಿಸುವುದಲ್ಲ. ಅದನ್ನು ಜನರಿಗೆ ನೀಡುವುದಾಗಿದೆ" ಎಂದು ಪ್ರಧಾನಿ ಹೇಳಿದರು.
"ಜನೌಷಧಿ ಕೇಂದ್ರಗಳಲ್ಲಿ ಈಗಾಗಲೇ ಶೇ.80 ರಷ್ಟು ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡಲಾಗುತ್ತಿದೆ. ಈಗಿನ ಬಜೆಟ್ನಲ್ಲಿ ಕ್ಯಾನ್ಸರ್ ಮತ್ತು ಗಂಭೀರ ಕಾಯಿಲೆಗಳಿಗೆ 30ಕ್ಕೂ ಹೆಚ್ಚು ಔಷಧಿಗಳನ್ನು ಮತ್ತಷ್ಟು ಅಗ್ಗವಾಗಿಸಿದೆ. ಸರ್ಕಾರವು ಮಧ್ಯಮ ವರ್ಗದ ಜನರಿಗಾಗಿ ಭರಪೂರ ಕೊಡುಗೆಯನ್ನು ನೀಡಿದೆ" ಎಂದರು.
ಆಪ್ಗೆ ತಿರುಗೇಟು : ಇದೇ ವೇಳೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿಗಳನ್ನು ನಾಶ ಮಾಡುತ್ತದೆ. ಈಗಿನ ಯೋಜನೆಗಳನ್ನು ನಿಲ್ಲಿಸುತ್ತದೆ ಎಂಬ ಆಮ್ ಆದ್ಮಿ ಪಕ್ಷದ (ಆಪ್) ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದರು.
"ದೆಹಲಿಯಲ್ಲಿನ ಒಂದೇ ಒಂದು ಕೊಳೆಗೇರಿಯನ್ನು ನಾಶ ಮಾಡಲ್ಲ. ಸಾರ್ವಜನಿಕರಿಗಾಗಿ ಇರುವ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಇದು ಬಿಜೆಪಿಯ ಗ್ಯಾರಂಟಿ" ಎಂದು ದೃಢಪಡಿಸಿದರು.