ಬಾಗಲಕೋಟೆ : ಪದ್ಮಶ್ರೀ ಪ್ರಶಸ್ತಿ ಪಡೆದ ಗೋಂಧಳಿ ಕಲಾವಿದ ಡಾ. ವೆಂಕಪ್ಪ ಅಂಬಾಜಿ ಸುಗತೇಕರ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪೂರ, ಜಿಲ್ಲಾಧಿಕಾರಿ ಜಾನಕಿ ಕೆ ಎಂ. ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಭೇಟಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಲ್ಲವನ್ನೂ ಮರೆತು ವೆಂಕಪ್ಪ ಅವರ ನೀತಿ ಬೋಧನೆ ಪಾಠವನ್ನು ಶಾಲಾ ಮಕ್ಕಳಂತೆ ಕೇಳಿದರು.
ಸನ್ಮಾನಿಸಿದ ಬಳಿಕ ವೆಂಕಪ್ಪ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಆಗಿರುವಂತಹ ಘಟನೆ, ಶಾಲೆಯ ಬಗ್ಗೆ ಹಾಗೂ ಶಿಕ್ಷಣ ಹೇಗೆ ಇರುತ್ತಿತ್ತು ಎನ್ನುವ ಬಗ್ಗೆ ಮಾಹಿತಿ ನೀಡಿದರು. ಆಗಿನ ನೀತಿ ಪಾಠದ ಬೋಧನೆ ಮಾಡಿದರು. ಶಾಲೆಯನ್ನೇ ಕಲಿಯದಿದ್ದರೂ ಶಿಕ್ಷಣದ ಬಗ್ಗೆ ಅವರಿಗೆ ಇರುವ ಅಭಿಮಾನ ಕಂಡು ವೆಂಕಪ್ಪನ ಮುಂದೆ ಅಧಿಕಾರಿಗಳು, ಸಚಿವರು ಕೈ ಕಟ್ಟಿಕೊಂಡು, ಮಕ್ಕಳು ಶಿಕ್ಷಕರಿಂದ ಹೇಗೆ ಪಾಠ ಕೇಳುತ್ತಾರೆಯೋ ಹಾಗೆ ಕೇಳುತ್ತಾ ಮಂತ್ರಮುಗ್ಧರಾದರು.
ನಂತರ ವೆಂಕಪ್ಪನ ಗೋಂಧಳಿ ಹಾಡಿನ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಅವರೂ ಸಹ ತಮ್ಮ ಗೋಂಧಳಿ ಹಾಡನ್ನು ಹಾಡುವ ಮೂಲಕ ಸಚಿವರು ಹಾಗೂ ಅಧಿಕಾರಿಗಳ ಗಮನ ಸೆಳೆದರು.
ಶಿಕ್ಷಣ ಕಲಿಯಲಿಲ್ಲವಾದರೂ ದೇಶದಲ್ಲಿ ಹೆಸರುವಾಸಿಯಾಗಿರುವ ವೆಂಕಪ್ಪ ಸುಗತೇಕರ್ ಅವರು ಹಾಡು ಹಾಡುವುದನ್ನ ಕೇಳಿದರೆ, ಕೇಳುತ್ತಾ ಇರಬೇಕು ಅನ್ನಿಸುತ್ತದೆ. ಮನೆ ಮನೆಗೆ ತೆರಳಿ ದೇವಿಯ ಹಾಡನ್ನು ಹಾಡುತ್ತಾ, ತಮ್ಮದೇ ಸಂಪ್ರದಾಯ, ಸಂಸ್ಕೃತಿ ಪರಂಪರೆಯ ಬೆಳೆಸುವ ಮೂಲಕ ಗಮನ ಸೆಳೆಯುವಂತೆ ಮಾಡುತ್ತಿರುವುದು ಇವರಿಗೆ ಸಿಕ್ಕ ಆ ಪ್ರಶಸ್ತಿಗೆ ಇನ್ನಷ್ಟು ಗೌರವ ಹೆಚ್ಚಿಸಿದೆ.