ಹೈದರಾಬಾದ್:ಪ್ರತಿ ವರ್ಷ ಸೆಪ್ಟೆಂಬರ್ 21 ರಂದು 'ವಿಶ್ವ ಕೃತಜ್ಞತಾ ದಿನ'ವನ್ನು ಆಚರಿಸಲಾಗುತ್ತದೆ. ನಾವೆಷ್ಟು ಅದೃಷ್ಟಶಾಲಿಗಳು ಎಂಬುದನ್ನು ಸ್ಮರಿಸುವವ ದಿನವೇ ಈ 'ವಿಶ್ವ ಕೃತಜ್ಞತಾ ದಿನ'. ನಮ್ಮಲ್ಲಿರುವ ಕೃತಜ್ಞತಾ ಮನೋಭಾವ ಮತ್ತು ನಮ್ಮ ಸುತ್ತಲಿರುವವರಿಗೆ ಕೃತಜ್ಞತೆಯನ್ನು ತೋರಿಸುವ ದಿನ ಕೂಡ ಇದಾಗಿದೆ. ಕೃತಜ್ಞತೆ ಸಲ್ಲಿಸುವುದಕ್ಕೂ ಒಂದು ದಿನವಿದ್ದು, ಇದು ಕೂಡ ತನ್ನದೇಯಾದ ಇತಿಹಾಸ ಹೊಂದಿದೆ.
ಇತಿಹಾಸ: ವಿಶ್ವ ಕೃತಜ್ಞತಾ ದಿನವನ್ನು 1965ರಲ್ಲಿ ಹವಾಯಿಯಲ್ಲಿ ಮೊದಲು ಆರಂಭಿಸಲಾಯಿತು. ಇಂತಹದ್ದೊಂದು ದಿನ ಆಚರಿಸುವ ಬಗ್ಗೆ ವಿಶ್ವಸಂಸ್ಥೆಯ ಧ್ಯಾನ ಕೊಠಡಿಯಲ್ಲಿ ಪ್ರಪಂಚದಾದ್ಯಂತ ಬಂದ ಜನರು ಸಭೆ ಸೇರಿದ್ದರು. ಆಗ ತಜ್ಞತೆಗೆ ಒಂದು ಅಂತಾರಾಷ್ಟ್ರೀಯ ದಿನ ನಿಗದಿ ಮಾಡುವ ಸಲಹೆ ಮುಂದಿಡಲಾಯಿತು. ಅದರಂತೆ 1966ರಲ್ಲಿ, ಮೊದಲ ವಿಶ್ವ ಕೃತಜ್ಞತಾ ದಿನವನ್ನು ಸೆ. 21 ರಂದು ಕೃತಜ್ಞತಾ ದಿನವನ್ನು ಆಚರಿಸಲಾಯಿತು. ಆಗಿನಿಂದ ಪ್ರತೀ ವರ್ಷವೂ ಒಂದೊಂದು ಥೀಮ್ನೊಂದಿಗೆ ಈ ದಿನ ಆಚರಣೆಯಲ್ಲಿದೆ.
ಈ ವರ್ಷದ ಥೀಮ್: ಪ್ರತೀ ವರ್ಷದಂತೆ ಈ ವರ್ಷವೂ ಹೊಸ ವಿಚಾರದೊಂದಿಗೆ ಈ ದಿನದ ಆಚರಣೆ ನಡೆಯುತ್ತಿದೆ. "ಮೇರಿಯ ಜೊತೆಯಾಗಿ, (ಅನುಗ್ರಹ) ಕನಸಿನ ಮಾರ್ಗ ದರ್ಶನದಿಂದ ನಾವು ನಮ್ಮ ಸಾಮಾನ್ಯ ಮನೆಯನ್ನು, ಶಾಂತಿಯನ್ನು ಸ್ಥಾಪಿಸಿಕೊಳ್ಳುವುದರ ಮುಲಕ ಚಂದದಿ ನೋಡಿಕೊಳ್ಳುತ್ತೇವೆ" ಅನ್ನೋದು ಈ ವರ್ಷದ ಥೀಮ್ ಆಗಿದೆ.
ಕೃತಜ್ಞತೆ ಎಂದರೇನು?:ಕೃತಜ್ಞತೆ ಎಂದರೆ "ಧನ್ಯವಾದಗಳು" ಎಂದು ಹೇಳುವುದಕ್ಕಿಂತ ಹೆಚ್ಚು. ಇದು ಅಂತರಾಳದ ಭಾವನೆ ಮತ್ತು ಒಬ್ಬರ ಜೀವನವನ್ನು ಬದಲಾಯಿಸುವ ಪದ ಕೂಡ ಹೌದು. ಕೃತಜ್ಞತೆಯು ನಮ್ಮ ಜೀವನದ ಉತ್ಸಾಹ, ಉದಾರತೆ, ಸಹಾನುಭೂತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ಸಕಾರಾತ್ಮಕತೆಯನ್ನು ಗುರುತಿಸುವುದು, ಜೀವನದ ಅದ್ಭುತ ಅಂಶಗಳನ್ನು ಒಪ್ಪಿಕೊಳ್ಳುವ ಮತ್ತು ಶ್ಲಾಘಿಸುವ ಒಂದು ಮಾರ್ಗ ಕೂಡ ಹೌದು. ಕೃತಜ್ಞತೆ ಎಂಬ ಪದವು ಲ್ಯಾಟಿನ್ ಪದ ಗ್ರ್ಯಾಟಿಯಾದಿಂದ ಬಂದಿದ್ದು, ಇದರರ್ಥ ಅನುಗ್ರಹ, ಕೃಪೆ, ಸಂತೋಷ, ಸ್ವಾಗತ ಅಂತಲೂ ಹೇಳಬಹುದು. ಕೃತಜ್ಞತೆ ನಮ್ಮ ಭಾವನಾತ್ಮಕ ಪ್ರತಿಕ್ರಿಯೆಗಿಂತ ಹೆಚ್ಚಾಗಿದ್ದರಿಂದ ನಮ್ಮ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಕೂಡ ಬೀರುತ್ತದೆ. ನಮಗೆ ತಿಳುವಳಿಕೆ ನೀಡಿದ, ಜ್ಞಾನ ವೃದ್ಧಿ ಮಾಡಲು ಸಹಾಯ ಮಾಡಿದ ಯಾವುದೇ ವ್ಯಕ್ತಿಗಾದರೂ ನಾವು ಗೌರವ ತೋರುವುದೇ ಕೃತಜ್ಞತೆ ಆಗಿದೆ.
ಮಾನಸಿಕ ಸ್ವಾಸ್ಥ್ಯ:ಕೃತಜ್ಞತೆಯು ದುಃಖ ಮತ್ತು ಚಿಂತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ದೈಹಿಕ ಆರೋಗ್ಯದ ಜೊತೆಗೆ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.