ನವದೆಹಲಿ:ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ತನ್ನ ವರದಿಯನ್ನು ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದೆ. ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಬಿರ್ಲಾ ಅವರನ್ನು ಅವರ ಸಂಸತ್ ಭವನದ ಕಚೇರಿಯಲ್ಲಿ ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಿದರು.
ಆಡಳಿತಾರೂಢ ಬಿಜೆಪಿಯ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಒಳಗೊಂಡ ತನ್ನ ವರದಿಯನ್ನು ಸಮಿತಿಯು ಬುಧವಾರ ಬಹುಮತದ ಮತದಿಂದ ಅಂಗೀಕರಿಸಿತ್ತು. ಸಮಿತಿಯ ಈ ಕ್ರಮವು ವಕ್ಫ್ ಮಂಡಳಿಗಳನ್ನು ನಾಶಪಡಿಸುವ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ವಕ್ಫ್ (ತಿದ್ದುಪಡಿ) ಮಸೂದೆಯ ಸಂಸತ್ತಿನ ಜಂಟಿ ಸಮಿತಿಯು ಕರಡು ಶಾಸನದ ವರದಿಯನ್ನು 15-11 ಬಹುಮತದ ಮತಗಳಿಂದ ಬುಧವಾರ ಅಂಗೀಕರಿಸಿದೆ. ನಂತರ ವಿರೋಧ ಪಕ್ಷದ ಸದಸ್ಯರು ವರದಿಯ ಬಗ್ಗೆ ಭಿನ್ನಾಭಿಪ್ರಾಯ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾದ ಈ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಪ್ರಯತ್ನಿಸುತ್ತದೆ ಎಂದು ಬಿಜೆಪಿ ಸದಸ್ಯರು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷಗಳು ಇದನ್ನು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ ಮತ್ತು ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಎಂದು ಕರೆದಿವೆ.
ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆ, 2025ರ ಪ್ರಮುಖ ಅಂಶಗಳು:
1. ಮುಸ್ಲಿಂ ಮಹಿಳಾ ಸಬಲೀಕರಣ ಮತ್ತು ವಕ್ಫ್ ನಿರ್ವಹಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ವಕ್ಫ್ ಮಂಡಳಿಗಳು (ಸೆಕ್ಷನ್ 14) ಮತ್ತು ಕೇಂದ್ರ ವಕ್ಫ್ ಮಂಡಳಿ (ಸೆಕ್ಷನ್ 9) ಎರಡರಲ್ಲೂ ಇಬ್ಬರು ಮುಸ್ಲಿಂ ಮಹಿಳೆಯರನ್ನು ಸದಸ್ಯರನ್ನಾಗಿ ಸೇರಿಸಲಾಗುವುದು.
2. ರಾಜ್ಯ ವಕ್ಫ್ ಮಂಡಳಿಗಳಿಗೆ ಈಗ ಮುಸ್ಲಿಂ ಒಬಿಸಿ ಸಮುದಾಯದಿಂದ ಓರ್ವ ಸದಸ್ಯರನ್ನು ನೇಮಿಸಲಾಗುವುದು. (ಸೆಕ್ಷನ್ 14).
3. ರಾಜ್ಯ ಸರ್ಕಾರವು ಅಘಾಖಾನಿ ಮತ್ತು ಬೋಹ್ರಾ ಸಮುದಾಯಗಳಿಗೆ ಅವರ ವಿಶಿಷ್ಟ ಧಾರ್ಮಿಕ ಅಗತ್ಯಗಳನ್ನು ಗುರುತಿಸಿ ಪ್ರತ್ಯೇಕ ವಕ್ಫ್ ಮಂಡಳಿಗಳನ್ನು ಸ್ಥಾಪಿಸಬಹುದು (ಸೆಕ್ಷನ್ 13).
4. ವಕ್ಫ್ ಅಲಾಲ್ ಔಲಾದ್ (ಕುಟುಂಬ ವಕ್ಫ್) ನಲ್ಲಿ, ಮಹಿಳೆಯರ ಪಿತ್ರಾರ್ಜಿತ ಹಕ್ಕುಗಳನ್ನು ರಕ್ಷಿಸಲಾಗುವುದು. ಮಹಿಳಾ ವಾರಸುದಾರರು ತಮ್ಮ ಸರಿಯಾದ ಪಾಲನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಂಡ ನಂತರವೇ ವಕೀಫ್ ಆಸ್ತಿಯನ್ನು ಸಮರ್ಪಿಸಬಹುದು (ಸೆಕ್ಷನ್ 3 ಎ (2)).