ಕೋಲ್ಕತ್ತಾ(ಪಶ್ಚಿಮ ಬಂಗಾಳ): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 'ಶೂನ್ಯ' ಸಂಪಾದನೆಯ ಬಳಿಕ ಪ್ರಾದೇಶಿಕ ಪಕ್ಷಗಳು ಒಂದೊಂದಾಗಿ ಅದರ ವಿರುದ್ಧ ಮುಗಿಬಿದ್ದಿವೆ. I.N.D.I.A ಕೂಟದ ನಾಯಕತ್ವ ಹೊಂದಿರುವ ಪಕ್ಷದ ಜೊತೆ 2026ರಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಘೋಷಿಸುವ ಮೂಲಕ ಹಳೆಯ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಬೇಕಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾಗಿ ಪಕ್ಷದ ಮುಖವಾಣಿ 'ಜಾಗೋ ಬಾಂಗ್ಲಾ' ವರದಿ ಮಾಡಿದೆ.
ಮಮತಾ ಬ್ಯಾನರ್ಜಿ ಹೇಳಿದ್ದೇನು?: ಮಮತಾ ಅವರು ತಮ್ಮ ಶಾಸಕರನ್ನುದ್ದೇಶಿಸಿ "2026ರಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಟಿಎಂಸಿ ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ನಮಗೆ ಯಾರ ಸಹಾಯವೂ ಅಗತ್ಯವಿಲ್ಲ. ನಾವು ಏಕಾಂಗಿಯಾಗಿ ಹೋರಾಡಿ ಗೆಲ್ಲೋಣ" ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
"ಮುಂದಿನ ವರ್ಷದ ಚುನಾವಣೆಗೆ ಪಕ್ಷವು ಈಗಲೇ ಸಿದ್ಧತೆ ಪ್ರಾರಂಭಿಸಬೇಕು. ಇಲ್ಲಿ ಮೈತ್ರಿಕೂಟದ ಪ್ರಶ್ನೆಯೇ ಇಲ್ಲ. ಬಂಗಾಳದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವಿಲ್ಲ. ಅದರ ಜೊತೆಗೆ ಮೈತ್ರಿ ಅಗತ್ಯವಿಲ್ಲ. ತೃಣಮೂಲ ಪಕ್ಷವು ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ಚುನಾವಣೆ ಉಲ್ಲೇಖಿಸಿರುವ ಮಮತಾ, "ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸಮನ್ವಯದ ಕೊರತೆಯೇ ಸೋಲಿಗೆ ಕಾರಣ. ಹರಿಯಾಣದಲ್ಲೂ ಇದೇ ರೀತಿಯ ಎಡವಟ್ಟಿನಿಂದಾಗಿ ಇಂಡಿಯಾ ಕೂಟದ ಪಕ್ಷಗಳು ಸೋತವು. ಇದು ಬಿಜೆಪಿಗೆ ಲಾಭ ತಂದಿದೆ. ಕಾಂಗ್ರೆಸ್ ಮಿತ್ರ ಪಕ್ಷಗಳ ಜೊತೆ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿವೆ" ಎಂದು ಆರೋಪಿಸಿದ್ದಾಗಿ ವರದಿ ಹೇಳಿದೆ.
ಕಾಂಗ್ರೆಸ್ ಪ್ರತಿಕ್ರಿಯೆ ಏನು?: ಮಮತಾ ಬ್ಯಾನರ್ಜಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್, "ಪ್ರಾದೇಶಿಕ ಪಕ್ಷಗಳಿಗೆ ನಾವು ಮುಖ್ಯವಲ್ಲ ಎನ್ನಿಸಿದರೆ ಯಾಕೆ ತಲೆ ಕೆಡಿಸಿಕೊಳ್ಳಬೇಕು. ದೆಹಲಿ ಫಲಿತಾಂಶದ ನಂತರ ಇತರ ಪ್ರಾದೇಶಿಕ ಪಕ್ಷಗಳು ಭೀತಿಗೊಳಗಾಗಿವೆ. ಹೀಗಾಗಿ, ಇಂತಹ ಅನಗತ್ಯ ಹೇಳಿಕೆ ನೀಡುತ್ತಿವೆ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿದರೆ, ಫಲಿತಾಂಶ ಏನಾಗುತ್ತದೆ ಎಂಬುದನ್ನು ಇತರ ಪಕ್ಷಗಳು ಅರಿತುಕೊಂಡಿವೆ. ಆಪ್ ಸೇರಿ ಮತ್ತಿತರ ಪಕ್ಷಗಳು ಬಿಜೆಪಿಯ ಬಿ-ತಂಡದಂತಿವೆ. 2011ರಲ್ಲಿ ಎಡಪಕ್ಷಗಳನ್ನು ಸೋಲಿಸಿ ಟಿಎಂಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಸಹಾಯ ಮಾಡಿತು ಎಂಬುದನ್ನು ಅದರ ನಾಯಕರು ಮರೆತಿದ್ದಾರೆ" ಎಂದು ಟೀಕಿಸಿದರು.
ನಮ್ಮದೇ ಅಧಿಕಾರ-ಬಿಜೆಪಿ: ಕಾಂಗ್ರೆಸ್ ಮತ್ತು ಟಿಎಂಪಿ ಹೇಳಿಕೆಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿ, "ಟಿಎಂಸಿ ಏಕಾಂಗಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೂ, ಫಲಿತಾಂಶ ನಮ್ಮದೇ ಆಗಿರುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ವಿಧಾನಸಭೆ ಚುನಾವಣೆ : ಕಾಂಗ್ರೆಸ್ನ 70 ಅಭ್ಯರ್ಥಿಗಳಲ್ಲಿ 67 ಹುರಿಯಾಳುಗಳಿಗೆ ಠೇವಣಿಯೇ ಉಳಿಯಲಿಲ್ಲ!
ದೆಹಲಿ ಗದ್ದುಗೆಯಿಂದ ಆಪ್ ಅನ್ನೇ ಗುಡಿಸಿ ಹಾಕಿದ ಬಿಜೆಪಿ: ಮಿತ್ರ ಪಕ್ಷಕ್ಕೆ ಕಾಂಗ್ರೆಸ್ ತಂದ ಆಪತ್ತೇನು?