ಕರ್ನಾಟಕ

karnataka

ETV Bharat / bharat

VIPಗಳಿಗೆ ಇನ್ನು ಮುಂದೆ ಎನ್​ಎಸ್​ಜಿ ಬದಲು ಸಿಆರ್​ಪಿಎಫ್​ ಯೋಧರಿಂದ ಭದ್ರತೆ: ಕೇಂದ್ರದ ಆದೇಶ

ವಿಐಪಿಗಳ ಭದ್ರತಾ ಕರ್ತವ್ಯದಿಂದ ಎನ್​ಎಸ್​ಜಿ ಕಮಾಂಡೋಗಳನ್ನು ಹಿಂಪಡೆಯಲಾಗಿದೆ.

ಎನ್​ಎಸ್​ಜಿ ಕಮಾಂಡೋ (ಸಂಗ್ರಹ ಚಿತ್ರ)
ಕಮಾಂಡೋಗಳು (ಸಂಗ್ರಹ ಚಿತ್ರ) (IANS)

By PTI

Published : Oct 16, 2024, 7:04 PM IST

ನವದೆಹಲಿ: ವಿಐಪಿಗಳ ಭದ್ರತಾ ಕರ್ತವ್ಯದಿಂದ ಎನ್​ಎಸ್​ಜಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಿಂಪಡೆದುಕೊಂಡಿದೆ. ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆಯಾಗಿರುವ ಎನ್ಎಸ್​ಜಿಯನ್ನು ವಿಐಪಿಗಳ ಭದ್ರತಾ ಕರ್ತವ್ಯಗಳಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಮತ್ತು ಸದ್ಯ ಅದು ಭದ್ರತೆ ಒದಗಿಸುತ್ತಿರುವ 9 ಜನ "ಅಧಿಕ ಅಪಾಯದ" ವಿಐಪಿಗಳಿಗೆ ಮುಂದಿನ ಒಂದು ತಿಂಗಳೊಳಗೆ ಸಿಆರ್‌ಪಿಎಫ್​ ಯೋಧರನ್ನು ನಿಯೋಜಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಇತ್ತೀಚೆಗೆ ಸಂಸತ್ತಿನ ಭದ್ರತಾ ಕರ್ತವ್ಯಗಳಿಂದ ಹಿಂತೆಗೆದುಕೊಂಡ ವಿಶೇಷ ತರಬೇತಿ ಪಡೆದ ಸಿಬ್ಬಂದಿಯ ಹೊಸ ಬೆಟಾಲಿಯನ್ ಅನ್ನು ವಿಐಪಿಗಳ ಭದ್ರತೆಗಾಗಿ ಸಿಆರ್​ಪಿಎಫ್​ ಜೊತೆಗೆ ಸೇರಿಸಲು ಇದೇ ಸಂದರ್ಭದಲ್ಲಿ ಗೃಹ ಸಚಿವಾಲಯ (ಎಂಎಚ್ಎ) ಅನುಮತಿ ನೀಡಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೊವಾಲ್, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೇರಿದಂತೆ ಒಂಬತ್ತು 'ಝಡ್ ಪ್ಲಸ್' ವರ್ಗದ ವಿಐಪಿಗಳಿಗೆ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್​ಜಿ) 'ಬ್ಲ್ಯಾಕ್ ಕ್ಯಾಟ್' ಕಮಾಂಡೋಗಳು ರಕ್ಷಣೆ ನೀಡುತ್ತಿದ್ದಾರೆ. ಆದರೆ ಇನ್ನು ಮುಂದೆ ಇವರೆಲ್ಲರಿಗೆ ಎನ್​ಎಸ್​ಜಿ ಬದಲಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯೋಧರು ಭದ್ರತೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವಾಲದ ಅಧೀನದಲ್ಲಿರುವ ಉಭಯ ಪಡೆಗಳ ನಡುವಿನ ಕರ್ತವ್ಯಗಳ ವರ್ಗಾವಣೆ ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ವಿಐಪಿ ಭದ್ರತಾ ಬೆಟಾಲಿಯನ್​ಗಳನ್ನು ಹೊಂದಿರುವ ಸಿಆರ್​ಪಿಎಫ್​ಗೆ ಈ ಉದ್ದೇಶಕ್ಕಾಗಿ ಏಳನೇ ಬೆಟಾಲಿಯನ್ ಅನ್ನು ವಿಲೀನಗೊಳಿಸಲು ಸೂಚಿಸಲಾಗಿದೆ. ಹೊಸ ಬೆಟಾಲಿಯನ್ ಕೆಲ ತಿಂಗಳ ಹಿಂದಿನವರೆಗೆ ಸಂಸತ್ತಿನ ಕಾವಲಿಗೆ ನಿಯೋಜನೆಯಾಗಿತ್ತು. ಕಳೆದ ವರ್ಷ ನಡೆದ ಭದ್ರತಾ ವ್ಯವಸ್ಥೆಯ ಉಲ್ಲಂಘನೆಯ ನಂತರ, ಸಂಸತ್ತಿನ ಭದ್ರತೆಯನ್ನು ಸಿಆರ್​ಪಿಎಫ್​ನಿಂದ ಸಿಐಎಸ್​ಎಫ್​ಗೆ ಹಸ್ತಾಂತರಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಅಯೋಧ್ಯೆಯ ರಾಮ ಮಂದಿರದ ಬಳಿ ಮತ್ತು ದೇಶದ ದಕ್ಷಿಣ ಭಾಗದಲ್ಲಿರುವ ಕೆಲ ಪ್ರಮುಖ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಕಮಾಂಡೋಗಳ 'ಸ್ಟ್ರೈಕ್ ತಂಡಗಳನ್ನು' ಹೆಚ್ಚಿಸಲು ಮತ್ತು ನಿಯೋಜಿಸಲು ಎನ್ಎಸ್​ಜಿಯನ್ನು ಪುನರ್​ ರಚಿಸಲು ಮತ್ತು ಅದರ ಮಾನವಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಸಾಸಿವೆ, ಕಡಲೆ, ಗೋಧಿ ಸೇರಿದಂತೆ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

ABOUT THE AUTHOR

...view details