ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂಬ ವರದಿಯನ್ನು ಮಾಜಿ ಡಿಸಿಎಂ ಮನೀಶ್ ಸಿಸೋಡಿಯೊ ತಳ್ಳಿಹಾಕಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಜಿ ಸಕ್ಸೇನಾ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಾಸಿಕ್ಯೂನ್ಗೆ ಅನುಮತಿ ನೀಡಿದ್ದಲ್ಲಿ, ಯಾಕೆ ಇಡಿ ಅನುಮತಿ ಕಾಪಿಯನ್ನು ತೋರಿಸುತ್ತಿಲ್ಲ. ಇದು ಸುಳ್ಳು ಮತ್ತು ತಪ್ಪು ದಾರಿಗೆ ಎಳೆಯುವ ಸುದ್ದಿ ಎಂಬುದು ಸ್ಪಷ್ಟವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ವಿಷಯದ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತಿದ್ದು, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರೆ ಕಾಪಿ ತೋರಿಸಿ ಎಂದು ಕೇಳಿದ್ದಾರೆ.
ಅಬಕಾರಿ ನೀತಿ ಹಗರಣ ಸಂಬಂಧ ಪಿಎಂಎಲ್ಎ ಅಡಿ ಕೇಜ್ರಿವಾಲ್ ವಿರುದ್ಧ ಪ್ರಾಸಿಕ್ಯೂಷನ್ಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು.
ಮದ್ಯ ನೀತಿ ಹಗರಣ ಎಎಪಿ ಸರ್ಕಾರ ವಿರುದ್ಧ ನಡೆಸಿದ ಪ್ರಮುಖ ಆರೋಪ ಒಂದಾಗಿದೆ. ಕೇಜ್ರಿವಾಲ್ ವಿರುದ್ಧ ಈಗಾಗಲೇ ಪಿಎಂಎಲ್ಎ ಪ್ರಕರಣ ದಾಖಲಾಗಿದ್ದು, ವಿಚಾರಣೆ ಆರಂಭವಾಗಬೇಕಿದೆ. ಈ ರೀತಿಯ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಕಡ್ಡಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಇಡಿ ಮುಖ್ಯ ಕಾರ್ಯದರ್ಶಿಯಿಂದ ಅನಮತಿ ಕೋರಬೇಕಿದೆ.
ಮಾನಿ ಲಾಂಡರಿಂಗ್ ಸಂಬಂಧಿತ ಪ್ರಕರಣದ ಆರೋಪದ ಮೇಲೆ ಇಡಿ ಕಳೆದ ಮಾರ್ಚ್ನಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಒಂದು ತಿಂಗಳು ಜೈಲಿನಲ್ಲಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದರು. ಬಿಡುಗಡೆಯಾದ ಬೆನ್ನಲ್ಲೇ ಕೇಜ್ರಿವಾಲ್ ದೆಹಲಿ ಸಿಎಂ ಪದವಿಗೆ ರಾಜೀನಾಮೆ ನೀಡಿದ್ದರು. ಈ ವೇಳೆ 2025ರ ಚುನಾವಣೆಯಲ್ಲಿ ಗೆದ್ದ ಬಳಿಕವೇ ಸಿಎಂ ಕಚೇರಿಗೆ ಬರುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇದೇ ಮದ್ಯ ನೀತಿ ಹಗರಣದಲ್ಲಿ ಸಿಸೋಡಿಯಾ ಕೂಡ ಕಾನೂನಾತ್ಮಕ ತೊಡಕನ್ನು ಅನುಭವಿಸುತ್ತಿದ್ದು, 18 ತಿಂಗಳ ಜೈಲು ವಾಸ ಅನುಭವಿಸಿದ್ದ ಅವರು ಆಗಸ್ಟ್ನಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಜೈಲಿನಿಂದ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಎಂ ಅರವಿಂದ್ ಕೇಜ್ರಿವಾಲ್