ವಾರಣಾಸಿ: ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದ ಕೀಲಿಕೈ ಕಳೆದು ಹೋಗಿ ಪ್ರಯಾಣಿಕರು ಕಾದು ಕುಳಿತ ಘಟನೆ ಭಾನುವಾರ ಸಂಜೆ ನಡೆದಿದೆ. ಪ್ರಯಾಣಿಕರೊಬ್ಬರು ಈ ವಿಚಾರವನ್ನು ತಮ್ಮ 'ಎಕ್ಸ್' ಜಾಲತಾಣದ ಮೂಲಕ ತಿಳಿಸಿದ್ದಾರೆ.
ಆಗಿದ್ದೇನು?: ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಬಬತ್‌ಪುರದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ 5.30ಕ್ಕೆ ಲ್ಯಾಂಡ್ ಆಗಿದೆ. ವಿಮಾನದಿಂದ ಇಳಿದ ಪ್ರಯಾಣಿಕರು ಆಗಮನ ಗೇಟ್ನತ್ತ ಸಾಗಿದ್ದಾರೆ. ಈ ವೇಳೆ ಗೇಟ್ ಬಂದ್ ಆಗಿದ್ದು, ಕಾದು ಕುಳಿತಿದ್ದಾರೆ. ಈ ಕುರಿತು ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಅವರು, ಗೇಟ್ ಕೀ ಕಳೆದು ಹೋಗಿರುವ ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಾಯುವಿಕೆಗೆ ಒಳಗಾದ ಪ್ರಯಾಣಿಕರು ಎಕ್ಸ್ ಜಾಲತಾಣದಲ್ಲಿ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದಾರೆ. "ಇದು ವಾರಣಾಸಿ ವಿಮಾನ ನಿಲ್ದಾಣದ ಪರಿಸ್ಥಿತಿ. ಇಮಿಗ್ರೇಷನ್ ಬಳಿಕ ಇಲ್ಲಿನ ಸಿಬ್ಬಂದಿ ಆಗಮನದ ಗೇಟ್ ಅನ್ನು ಅರ್ಧ ಗಂಟೆ ತೆರೆಯಲು ಸಾಧ್ಯವಾಗಿಲ್ಲ. ನಾವು ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ಅವರೊಂದಿಗೆ ಮಾತನಾಡಿದಾಗ ಕೀ ಕಾಣದಿರುವ ಸಂಗತಿ ಬೆಳಕಿಗೆ ಬಂತು. ಬಳಿಕ ಬೀಗ ಹೊಡೆದು ಬಾಗಿಲು ತೆರೆಯಲಾಯಿತು" ಎಂದು ತಿಳಿಸಿದ್ದಾರೆ.
ಈ ಘಟನೆಯನ್ನು ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಬೆಂಕಿ; ಕಿಟಕಿಯಿಂದ ಹಾರಿ ಪ್ರಯಾಣಿಕರು ಬಚಾವ್