ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷ ಮನೋಜ್ ಸೋನಿ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಸೋನಿ ಅಧಿಕಾರಾವಧಿಯು 2029ರ ಮೇವರೆಗೆ ಇತ್ತು. ಇದಕ್ಕೂ ಮುನ್ನವೇ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿವಾದ ಮುನ್ನೆಲೆಗೆ ಬಂದ ಬೆನ್ನಲ್ಲೇ ಯುಪಿಎಸ್‌ಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟಿರುವು ಗಮನಾರ್ಹ. ಆದರೆ, ಈ ವಿವಾದ ಮತ್ತು ಆರೋಪಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಯುಪಿಎಸ್‌ಸಿ ಅಧ್ಯಕ್ಷರು 15 ದಿನಗಳ ಹಿಂದೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ಇನ್ನೂ ಅಂಗೀಕಾರವಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಐಟಿ ವರದಿ ಮಾಡಿದೆ.
ಖ್ಯಾತರಾದ ಶಿಕ್ಷಣ ತಜ್ಞರಾದ 59 ವರ್ಷದ ಸೋನಿ 2017ರ ಜೂನ್ 28ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2023ರ ಮೇ 16ರಂದು ಆಯೋಗದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ಯುಪಿಎಸ್‌ಸಿ ಅಧ್ಯಕ್ಷರಾಗಿ ಮುಂದುವರೆಯಲು ಅವರು ಉತ್ಸುಕರಾಗಿಲ್ಲ. ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಬಯಸಿದ್ದಾರೆ. ಹೀಗಾಗಿ ತಮ್ಮನ್ನು ರಿಲೀವ್ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಲೋಕಸೇವಾ ಆಯೋಗವು ಅಧ್ಯಕ್ಷರ ನೇತೃತ್ವದಲ್ಲಿರುತ್ತದೆ. ಆಯೋಗವು ಗರಿಷ್ಠ ಹತ್ತು ಸದಸ್ಯರನ್ನು ಹೊಂದಬಹುದು. ಆದರೆ, ಯುಪಿಎಸ್ಸಿಯಲ್ಲಿ ಏಳು ಸದಸ್ಯರಿದ್ದಾರೆ. ಮಂಜೂರಾದ ಸಂಖ್ಯೆಗಿಂತ ಮೂವರು ಸದಸ್ಯರು ಕಡಿಮೆ ಇದ್ದಾರೆ. ಇನ್ನು, ಯುಪಿಎಸ್‌ಸಿಗೂ ಮೊದಲು ಮನೋಜ್ ಸೋನಿ ಮೂರು ಅವಧಿಗೆ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.
2009ರ ಆಗಸ್ಟ್ 1ರಿಂದ 2015ರ ಜುಲೈ 31ರವರೆಗೆ ಗುಜರಾತ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಸೋನಿ ಸತತವಾಗಿ ಎರಡು ಅವಧಿಗಳಿಗೆ ಕುಲಪತಿಯಾಗಿದ್ದರು. ಇದಕ್ಕೂ ಮುನ್ನ 2005ರಿಂದ 2008ರ ಏಪ್ರಿಲ್ರವರೆಗೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಸೋನಿ ಭಾರತದ ಅತ್ಯಂತ ಕಿರಿಯ ಕುಲಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕಾಂಗ್ರೆಸ್ ವಾಗ್ದಾಳಿ: ಯುಪಿಎಸ್‌ಸಿ ಅಧ್ಯಕ್ಷರ ರಾಜೀನಾಮೆ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, 2014ರಿಂದ ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಘನತೆ, ಚಾರಿತ್ರ್ಯ, ಸ್ವಾಯತ್ತತೆ ಮತ್ತು ವೃತ್ತಿಪರತೆಗೆ ಸಾಕಷ್ಟು ಹಾನಿಯಾಗಿದೆ. ಆದರೆ, ಕೆಲವೊಮ್ಮೆ ಸ್ವಯಂ-ಅಭಿಷಿಕ್ತ ನಾನ್-ಬಯೋಲಾಜಿಕಲ್ ಪ್ರಧಾನಿ ಕೂಡ ಸಾಕಷ್ಟು ಹೇಳಲಾಬೇಕಾಗುತ್ತದೆ. 2017ರಲ್ಲಿ ಗುಜರಾತ್‌ನಿಂದ ತಮ್ಮ ಮೆಚ್ಚಿನ ವಿದ್ಯಾವಂತರೊಬ್ಬರನ್ನು ಯುಪಿಎಸ್‌ಸಿ ಸದಸ್ಯರನ್ನಾಗಿ ಕರೆ ತಂದರು. 2023ರಲ್ಲಿ ಆರು ವರ್ಷಗಳ ಅವಧಿಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಆದರೆ, ಈ ಗೌರವಾನ್ವಿತ ಸಂಭಾವಿತ ವ್ಯಕ್ತಿ ಎಂದು ಕರೆಯಲ್ಪಡುವ ಅವರು ಈಗ ಐದು ವರ್ಷಗಳ ಅವಧಿಯ ಮುಕ್ತಾಯಕ್ಕೂ ಮುಂಚೆಯೇ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಯಾವುದೇ ಕಾರಣಗಳನ್ನು ನೀಡಬಹುದು. ಯುಪಿಎಸ್‌ಸಿ ಭಾಗಿಯಾಗಿರುವ ಪ್ರಸ್ತುತ ವಿವಾದವನ್ನು ಗಮನಿಸಿದರೆ, ಅವರನ್ನು ಹೊರಹಾಕಲಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ'' ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪ್ರೊಬೇಷನರಿ ಐಎಎಸ್ ಪೂಜಾ ಖೇಡ್ಕರ್ ವಿವಾದ: ತಾಯಿಗೆ ಸೇರಿದ ಕಂಪನಿಗೆ ಸೀಲ್, ತಂದೆಗೆ ತಾತ್ಕಾಲಿಕ ರಿಲೀಫ್