ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ: ಸದನ ಮುಂದೂಡಿಕೆ - UPROAR IN J K ASSEMBLY

ಇಂದು ಜಮ್ಮು-ಕಾಶ್ಮೀರ ಸದನ ಆರಂಭವಾಗುತ್ತಿದ್ದಂತೆ ನಿನ್ನೆ ಅಂಗೀಕಾರವಾದ ನಿರ್ಣಯದ ವಿರುದ್ಧ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.

uproar-in-j-k-assembly-over-special-status-resolution-proceedings-briefly-adjourned
ಜಮ್ಮು ಕಾಶ್ಮೀರ ವಿಧಾನಸಭೆ (ANI)

By PTI

Published : Nov 7, 2024, 11:43 AM IST

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿಸುವಂತೆ ಅಂಗೀಕರವಾದ ನಿರ್ಣಯದ ವಿರುದ್ಧ ಇಂದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದು, ಭಾರಿ ಕೋಲಾಹಲ ಉಂಟಾದ ಕಾರಣಕ್ಕೆ ಸದನವನ್ನು ಸ್ಪೀಕರ್ ಕೆಲಕಾಲ ಮುಂದೂಡಿದರು.

ಸದನ ಆರಂಭವಾಗುತ್ತಿದ್ದಂತೆ ಬುಧವಾರ ಅಂಗೀಕಾರವಾದ ನಿರ್ಣಯದ ವಿರುದ್ಧ ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ನಿರ್ಣಯದ ಕುರಿತು ಬಿಜೆಪಿ ಶಾಸಕ ಹಾಗೂ ವಿಪಕ್ಷ ನಾಯಕ ಸುನಿಲ್​ ಶರ್ಮಾ ಸದನದಲ್ಲಿ ಮಾತನಾಡುತ್ತಿದ್ದಾಗ, ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಲಂಗೇಟ್ ಶೇಖ್ ಖುರ್ಷೀದ್, ಆರ್ಟಿಕಲ್ 370 ಮತ್ತು 35ಎ ಅನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕೂಡ ಸದನದ ಬಾವಿಗಿಳಿದು, ಬ್ಯಾನರ್​ ಕಸಿದು, ತುಂಡು ತುಂಡಾಗಿ ಹರಿದು ಹಾಕಿದರು. ಈ ವೇಳೆ ಉಂಟಾದ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್​​ ಅಬ್ದುಲ್​ ರಹೀಂ ಸದನವನ್ನು 15 ನಿಮಿಷ ಕಾಲ ಮುಂದೂಡಿದರು. ಕಲಾಪ ಮುಂದೂಡಿದ ಬಳಿಕವೂ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರೆಸಿದರು.

ಬುಧವಾರ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಕುರಿತು ಸರ್ಕಾರ ನಿರ್ಣಯ ಮಂಡಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಕಲಾಪಕ್ಕೆ ಪದೇ ಪದೇ ಅಡ್ಡಿಯಾದ ಹಿನ್ನೆಲೆಯಲ್ಲಿ ಸದನ ಮುಂದೂಡಲಾಗಿತ್ತು.

ಸರ್ಕಾರದ ಪರ ನಿರ್ಣಯ ಮಂಡಿಸಿದ ಉಪಮುಖ್ಯಮಂತ್ರಿ ಸುರಿಂದರ್​ ಚೌಧರಿ, ಶಾಸಕಾಂಗ ಸಭೆಯು ಜಮ್ಮು ಮತ್ತು ಕಾಶ್ಮೀರದ ಜನರ ಗುರುತು, ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸುವ ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ. ಮತ್ತು ಅವುಗಳನ್ನು ಏಕಪಕ್ಷೀಯ ತೆಗೆದುಹಾಕುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ. ವಿಶೇಷ ಸ್ಥಾನಮಾನ, ಸಾಂವಿಧಾನಿಕ ಖಾತರಿ ಮತ್ತು ನಿಬಂಧನೆಗಳನ್ನು ಪುನಃಸ್ಥಾಪಿಸಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ರೂಪಿಸಲು ಜಮ್ಮು-ಕಾಶ್ಮೀರದ ಜನರ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆ ಪ್ರಾರಂಭಿಸಲು ಸದನ ಭಾರತ ಸರ್ಕಾರಕ್ಕೆ ಕರೆ ನೀಡುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: 370ನೇ ವಿಧಿ ಮರುಸ್ಥಾಪನೆ ಕೋರಿ ಜಮ್ಮು & ಕಾಶ್ಮೀರ ವಿಧಾನಸಭೆ ನಿರ್ಣಯ ಅಂಗೀಕಾರ

ABOUT THE AUTHOR

...view details