ಭುಪಲಪಲ್ಲಿ (ತೆಲಂಗಾಣ):ಸಾಲ ಪಡೆದು ವಾರದ ಕಂತಾದ 200 ರೂಪಾಯಿ ನೀಡಲು ಸಾಧ್ಯವಾಗದೇ, ಸಾಲಗಾರರ ಕಿರುಕುಳದಿಂದ ದಂಪತಿಗಳಿಬ್ಬರು ಬದುಕಿಗೆ ವಿದಾಯ ಹೇಳಿರುವ ಹೃದಯವಿದ್ರಾವಕ ಘಟನೆ ಭುಪಲಪಲ್ಲಿ ಮಂಡಲದ ಕಮಲಪುರ ಗ್ರಾಮದಲ್ಲಿ ನಡೆದಿದೆ. ಬನೊತ್ ದೇವೇಂದರ್ (37) ಮತ್ತು ಆತನ ಹೆಂಡತಿ ಚಂದನ (32) ಸಾವನ್ನಪ್ಪಿದ ದಂಪತಿ. ಕೃಷಿ ಕೆಲಸ ಮಾಡಿಕೊಂಡು ಸಾಗುತ್ತಿದ್ದ ಈ ದಂಪತಿಗೆ 14 ಮತ್ತು 12 ವರ್ಷದ ಮಕ್ಕಳಿದ್ದು, ಅವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.
ಏನಿದು ಘಟನೆ:ಗ್ರಾಮದ ಇತರೆ ಮಹಿಳೆಯರ ಜೊತೆ ಸೇರಿ ಚಂದನ ಖಾಸಗಿ ಸಾಲಗಾರನಿಂದ ವಾರಕ್ಕೆ 200 ರೂ. ಸಾಲದ ಕಂತು ನೀಡುವುದಾಗಿ ಹೇಳಿ, 2.50 ಲಕ್ಷ ಸಾಲವನ್ನು ಪಡೆದಿದ್ದರು. ವರ್ಷಗಳ ಕಾಲ ಸಾಲವನ್ನು ಕಟ್ಟುತ್ತಿದ್ದ ಚಂದನ ಕಳೆದ ಕೆಲವು ತಿಂಗಳಿನಿಂದ ಗಂಡ ಮತ್ತು ಮಕ್ಕಳು ಅನಾರೋಗ್ಯಕ್ಕೆ ತುತ್ತಾದ ಕಾರಣ ವಾರದ ಕಂತು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಕಂತು ಪಾವತಿ ಮಾಡದ ಹಿನ್ನೆಲೆ ಸಾಲಗಾರನ ಕಿರುಕುಳ ಕೂಡ ಹೆಚ್ಚಾಗಿದ್ದು, ಕುಟುಂಬದ ಮೇಲೆ ಆರ್ಥಿಕ ಸಂಕಷ್ಟದ ಹೊರೆ ಕೂಡ ಜಾಸ್ತಿಯಾಗಿ, ಇಬ್ಬರೂ ಮಾನಸಿಕವಾಗಿ ಕುಗ್ಗಿದ್ದರು.