ನಾಸಿಕ್ (ಮಹಾರಾಷ್ಟ್ರ): ಆಗ್ರಾ - ಮುಂಬೈ ಹೆದ್ದಾರಿಯಲ್ಲಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಸಿಕ್‌ನಿಂದ ಅಡ್ಗಾಂವ್‌ಗೆ ರಸಗೊಬ್ಬರವನ್ನು ಸಾಗಿಸುತ್ತಿದ್ದ ಹೈಸ್ಪೀಡ್ ಟ್ರಕ್ ಡಿವೈಡರ್ ದಾಟಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮುಂಬೈ ಆಗ್ರಾ ಹೆದ್ದಾರಿಯ ಸತಾನಾ ಬಳಿಯ ಅಡ್ಗಾಂವ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಟ್ರಕ್‌ನ ಒಂದು ಟೈರ್ ಒಡೆದ ಕಾರಣ ಟ್ರಕ್ ಡಿವೈಡರ್ ದಾಟಿ, ಸತಾರದಿಂದ ನಾಸಿಕ್‌ಗೆ ಬರುತ್ತಿದ್ದ ಬ್ರೆಜಾ ಕಾರಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತಪಟ್ಟವರನ್ನು ಇಂದಿರಾನಗರ ನಿವಾಸಿ ಸೀಜ್ಜು ಪಠಾಣ್ (38), ಇಂದಿರಾನಗರದ ಶ್ರದ್ಧಾ ವಿಹಾರ್ ನಿವಾಸಿ ಅಕ್ಷಯ್ ಜಾಧವ್ (24), ಲೇಖ್‌ನಗರ ಸಿಡ್ಕೋ ನಿವಾಸಿಗಳಾದ ರೆಹಮಾನ್ ಸುಲೇಮಾನ್ ತಾಂಬೋಲಿ (48), ಮತ್ತು ಅವರ ಸೋದರಳಿಯ ಅರ್ಬಾಜ್ ಚಂದುಭಾಯ್ ತಾಂಬೋಲಿ ಎಂದು ಗುರುತಿಸಲಾಗಿದೆ.