ಶ್ರೀನಗರ: ರಾಜ್ಯದ ಪ್ರಮುಖ ರಾಜಕೀಯ ಪಕ್ಷವಾಗಿರುವ ನ್ಯಾಷನಲ್ ಕಾನ್ಫರೆನ್ಸ್ನ ಕಥುವಾ ಜಿಲ್ಲಾಧ್ಯಕ್ಷ ಸೇರಿದಂತೆ ಅನೇಕ ಉನ್ನತ ನಾಯಕರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಪಕ್ಷಾಂತರ ಜಮ್ಮುವಿನ ಹಿರಿಯ ರಾಜಕೀಯ ನಾಯಕ ಮತ್ತು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಉನ್ನತ ಮುಖಂಡರು ಮಾತ್ರವಲ್ಲದೆ ಬೆಂಬಲಿಗರು ಮತ್ತು ಜಿಲ್ಲಾ ಪದಾಧಿಕಾರಿಗಳು ಸಹ ಬಿಜೆಪಿ ಸೇರಿದ್ದು ಫಾರೂಕ್ ಅಬ್ದುಲ್ಲಾರಿಗೆ ನುಂಗಲಾರದ ತುತ್ತಾಗಿದೆ.
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಪಕ್ಷಕ್ಕೆ ಆಗಮಿಸಿದ ನಾಯಕರು ಹಾಗೂ ಕಾರ್ಯಕರ್ತರನ್ನು ಬರಮಾಡಿಕೊಂಡರು. "ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ನಿರ್ಮಾಣ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಬಿಜೆಪಿಯ ಕೊಡುಗೆ ಮತ್ತು ಸಾಧನೆಗಳು ಐತಿಹಾಸಿಕವಾಗಿವೆ" ಎಂದು ರೈನಾ ಈ ಸಂದರ್ಭದಲ್ಲಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಶ್ಲಾಘಿಸಿದ ರೈನಾ, ಭಾರತದ ಏಕತೆ ಮತ್ತು ಪ್ರಗತಿಯು ಪ್ರಧಾನಿಯವರ ಸಮರ್ಪಿತ ಪ್ರಯತ್ನಗಳ ಫಲಿತಾಂಶವಾಗಿದೆ ಎಂದರು.
ಒಂದು ಕಾಲದಲ್ಲಿ ಎನ್ಸಿ, ಪಿಡಿಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಜನರನ್ನು ಮತ್ತು ಅವರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಸರ್ಕಾರದ ಹಣವನ್ನು ಲೂಟಿ ಮಾಡಿವೆ ಎಂದು ರವೀಂದರ್ ರೈನಾ ಹೇಳಿದರು.
ಬಿಜೆಪಿ ಸೇರ್ಪಡೆಯಾದ ಎಲ್ಲರನ್ನೂ ಪ್ರೀತಿ ಮತ್ತು ಸೌಹಾರ್ದತೆಯಿಂದ ಸ್ವಾಗತಿಸಲಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ದೇವಿಂದರ್ ಸಿಂಗ್ ರಾಣಾ ಹೇಳಿದರು. ಬಿಜೆಪಿಗೆ ಸೇರುವ ಮೊದಲು ನ್ಯಾಷನಲ್ ಕಾನ್ಫರೆನ್ಸ್ನ ಕಥುವಾ ಜಿಲ್ಲಾ ಮುಖ್ಯಸ್ಥರಾಗಿದ್ದ ಸಂಜೀವ್ ಖಜುರಿಯಾ, ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳಿಂದ ತಳಮಟ್ಟದಲ್ಲಿ ಉಂಟಾದ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಬಲ್ವಿಂದರ್ ಸಿಂಗ್, ವಕ್ತಾರ ಫನಿ ಮತ್ತಿತರರು ಉಪಸ್ಥಿತರಿದ್ದರು. ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಜಸ್ಮೀತ್ ಕೌರ್ ಪಾಂಡೆ ಕಾರ್ಯಕ್ರಮ ನಿರ್ವಹಿಸಿದರು.
"ಕಳೆದ 35 ವರ್ಷಗಳಿಂದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದಲ್ಲಿದ್ದ ಹಿರಿಯ ನಾಯಕ ಮತ್ತು ಕಥುವಾ (ಗ್ರಾಮೀಣ) ಜಿಲ್ಲಾ ಅಧ್ಯಕ್ಷ ಸಂಜೀವ್ ಖಜುರಿಯಾ ಅಲಿಯಾಸ್ ರೋಮಿ ಖಜುರಿಯಾ ನೇತೃತ್ವದಲ್ಲಿ ಪಕ್ಷದ ಉನ್ನತ ನಾಯಕರು ತಮ್ಮ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಿರುವುದು ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ಗೆ ದೊಡ್ಡ ಆಘಾತವಾಗಿದೆ" ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಎಕ್ಸ್ನಲ್ಲಿ ಬರೆದಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ: ನಕಲಿ ಜಾತಿ ಪ್ರಮಾಣಪತ್ರ ವಿಚಾರಣೆ ಸ್ವತಃ ವರ್ಗಾಯಿಸಿಕೊಂಡ ಸುಪ್ರೀಂ ಕೋರ್ಟ್