ಅಮ್ರೇಲಿ (ಗುಜರಾತ್): ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಬೋರ್‌ವೆಲ್ ದುರಂತ ಸಂಭವಿಸಿದೆ. ಕೊಳವೆ ಬಾವಿಗೆ ಬಿದ್ದು ಒಂದೂವರೆ ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಆರೋಹಿ ಎಂದು ಗುರುತಿಸಲಾಗಿದೆ.
ಇಲ್ಲಿನ ಸೂರಜ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಈ ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದಳು ಎಂದು ತಿಳಿದು ಬಂದಿದೆ. ಬಳಿಕ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ನೆರವಿನೊಂದಿಗೆ ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು.
ಸುಮಾರು 17 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಶನಿವಾರ ಮುಂಜಾನೆ ಬಾಲಕಿಯನ್ನು ಹೊರತೆಗೆಯಲಾಗಿದೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ವೈದ್ಯರು ಪರೀಕ್ಷಿಸಿ ಕೊನೆಯುಸಿರೆಳೆದಿರುವುದಾಗಿ ದೃಢಪಡಿಸಿದರು. ಈ ಬೋರ್‌ವೆಲ್ 500 ಅಡಿ ಆಳವಿದ್ದು, ಅದರಲ್ಲಿ ಬಿದ್ದಿದ್ದ ಬಾಲಕಿ ಸುಮಾರು 50 ಅಡಿ ಆಳದಲ್ಲಿ ಸಿಲುಕಿದ್ದಳು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮೇಲೆತ್ತಲಾಗಿತ್ತು ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊಳವೆ ಬಾವಿಗೆ ಬಾಲಕಿ ಬಿದ್ದ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳೀಯ ಅಗ್ನಿಶಾಮಕ ಇಲಾಖೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಬಳಿಕ ಗಾಂಧಿನಗರದ ಎನ್‌ಡಿಆರ್‌ಎಫ್ ತಂಡವು ರಾತ್ರಿ 10 ಗಂಟೆಗೆ ಸ್ಥಳಕ್ಕೆ ದೌಡಾಯಿಸಿ, ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ರಕ್ಷಣಾ ಕಾರ್ಯಾಚರಣೆಯ ಶುರು ಮಾಡಿದ ಕೆಲ ಗಂಟೆಗಳಲ್ಲಿ ಬಾಲಕಿಯಲ್ಲಿ ಯಾವುದೇ ಚಲನವಲನ ಕಂಡು ಬಂದಿರಲಿಲ್ಲ. ಆದರೂ, ಆಕೆಯನ್ನು ಜೀವಂತವಾಗಿ ಹೊರತೆಗೆಯುವ ಪ್ರಯತ್ನವಾಗಿ 108 ಆಂಬ್ಯುಲೆನ್ಸ್ ಮೂಲಕ ಆಕ್ಸಿಜನ್ ಸಹ ಪೂರೈಸಲಾಗಿತ್ತು ಎಂದು ಅಮ್ರೇಲಿಯ ಅಗ್ನಿಶಾಮಕ ಅಧಿಕಾರಿ ಎಚ್.ಸಿ.ಗಾಧ್ವಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಿಕ್ಕಿಂನಲ್ಲಿ ಮಳೆ ಅಬ್ಬರ: ಹಲವೆಡೆ ಭೂಕುಸಿತ, ಸಂಚಾರ ಬಂದ್; ಸಂಕಷ್ಟದಲ್ಲಿ 1,500 ಪ್ರವಾಸಿಗರು