ನವದೆಹಲಿ: ತಮಿಳುನಾಡಿನ ಹಾಲಿ ಶಾಸಕಿ ಎಸ್.ವಿಜಯಾಧರಣಿ ಕಾಂಗ್ರೆಸ್ ಪಕ್ಷ ತೊರೆದು ಶನಿವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಈ ಬೆಳವಣಿಗೆ ನಡೆದಿದೆ. ಕಮಲ ಪಕ್ಷಕ್ಕೆ ಸೇರಿದ ಬೆನ್ನಲ್ಲೇ ವಿಜಯಾಧರಣಿ, ದೇಶಕ್ಕೆ ಪ್ರಧಾನಿ ಮೋದಿ ನಾಯಕತ್ವ ಅತ್ಯಂತ ಮಹತ್ವದ್ದಾಗಿದೆ ಎಂದೂ ಹೇಳಿದ್ದಾರೆ.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಕೇಂದ್ರ ಸಚಿವ ಎಲ್.ಮುರುಗನ್ ಮತ್ತು ತಮಿಳುನಾಡಿನ ಬಿಜೆಪಿ ಚುನಾವಣಾ ಉಸ್ತುವಾರಿ, ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಸಮ್ಮುಖದಲ್ಲಿ ವಿಜಯಾಧರಣಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯಾಧರಣಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಲವನ್‌ಕೋಡ್ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿಲವನ್‌ಕೋಡ್ ಕ್ಷೇತ್ರದಲ್ಲಿ ಬಿಜೆಪಿ ಸಹ ಗೆಲುವು ಸಾಧಿಸಿತ್ತು ಎಂಬುದು ಗಮನಾರ್ಹವಾಗಿದೆ.
ಬಿಜೆಪಿಗೆ ಸೇರುವ ಮೊದಲು ವಿಜಯಾಧರಣಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ತಮ್ಮ ಪತ್ರವನ್ನು ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ನ ಹಾಲಿ ಶಾಸಕ ಸ್ಥಾನವನ್ನು ತೊರೆದು ವಿಜಯಾಧರಣಿ ಪಕ್ಷಕ್ಕೆ ಬಂದಿರುವುದರಿಂದ ದಕ್ಷಿಣ ರಾಜ್ಯ ತಮಿಳುನಾಡಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ. ಅಲ್ಲದೇ, ಬಿಜೆಪಿ ಸೇರಿದ ಬಳಿಕ ಅವರು, ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಕೇಂದ್ರ ಸರ್ಕಾರದ ಹಲವಾರು ಉತ್ತಮ ಯೋಜನೆಗಳನ್ನು ಶ್ಲಾಘಿಸಿದ್ದಾರೆ.