ನವದೆಹಲಿ:ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಅತಿಶಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗೆಗಿನ ಘೋಷಣೆಯ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಗಂಭೀರವಾದ ಮತ್ತೊಂದು ಆರೋಪ ಮಾಡಿದ್ದಾರೆ. ಇಂದು ಕೂಡ ಅತಿಶಿ ಪೋಷಕರ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪೋಸ್ಟ್ ವೊಂದನ್ನು ಹಾಕಿದ್ದಾರೆ. 'ಅತಿಶಿ ಮರ್ಲೆನಾ ಅವರ ಪೋಷಕರು ಎಸ್‌ಎಆರ್ ಗಿಲಾನಿ ಅವರೊಂದಿಗೆ ಆಳವಾದ ಸಂಬಂಧ ಹೊಂದಿದ್ದರು. ಸಂಸತ್ತಿನ ಮೇಲಿನ ದಾಳಿಯಲ್ಲಿ ಗಿಲಾನಿ ಕೈವಾಡವಿದೆ ಎಂಬ ಆರೋಪಗಳಿದ್ದವು ಎಂಬ ಅಂಶವನ್ನು ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.
ಮಲಿವಾಲ್ ಎಕ್ಸ್ ಹ್ಯಾಂಡಲ್ನಲ್ಲಿ ಹೇಳಿರುವುದಿಷ್ಟು:2016ರಲ್ಲಿ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಅಫ್ಜಲ್ ಗುರು ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಅತಿಶಿಯ ಪೋಷಕರು ಗಿಲಾನಿಯೊಂದಿಗೆ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದಲ್ಲಿ “ಒಬ್ಬ ಅಫ್ಜಲ್‌ನನ್ನು ಕೊಂದರೆ ಲಕ್ಷ ಜನ ಹುಟ್ಟುತ್ತಾರೆ, ಕಾಶ್ಮೀರ ಸ್ವಾತಂತ್ರ್ಯ ಬೇಡುತ್ತದೆ” ಎಂಬ ಘೋಷವಾಕ್ಯಗಳನ್ನು ಹಾಕಲಾಗಿತ್ತು ಎಂದು ಅವರು ತಮ್ಮ ಎಕ್ಸ್ ಹ್ಯಾಂಡಲ್ ಬರಹದಲ್ಲಿ ಹೇಳಿದ್ದಾರೆ. ತಮ್ಮ ಟ್ವೀಟ್ನ ಕೊನೆಯಲ್ಲಿ 'ದೇವರೇ ದೆಹಲಿಯನ್ನು ಕಾಪಾಡು!' ಎಂದು ಕೂಡಾ ಬರೆದುಕೊಂಡಿದ್ದಾರೆ.