ಕೊಯಮತ್ತೂರು:ಕಾಲೇಜು ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಾಲುಮಿಚಂಬಟ್ಟಿ ಬಳಿಯ ಮೈಲೇರಿಪಾಳ್ಯಂನ ಖಾಸಗಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪ್ರಭು (19) ಎಂಬಾತ ಕಟ್ಟಡದ 4ನೇ ಮಹಡಿಯಿಂದ ಜಿಗಿದು ಗಾಯಗೊಂಡಿದ್ದಾನೆ.
ಈರೋಡ್ ಜಿಲ್ಲೆಯ ಪೆರುಂದುರೈ ಬಳಿಯ ಮಕೂರ್ ಗ್ರಾಮದ ಪ್ರಭು ಕಾಲೇಜು ಹಾಸ್ಟೆಲ್ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಆತ ನಿನ್ನೆ (ಅಕ್ಟೋಬರ್ 29) ತಾನಿರುವ ವಿದ್ಯಾರ್ಥಿ ನಿಲಯದ 4 ನೇ ಮಹಡಿಯಿಂದ ಇದ್ದಕ್ಕಿದ್ದಂತೆ ಜಿಗಿದಿದ್ದಾನೆ. ಕೈ ಮತ್ತು ಕಾಲುಗಳ ಮೂಳೆ ಮುರಿದುಕೊಂಡು ಗಂಭೀರ ಸ್ಥಿತಿಯಲ್ಲಿರುವ ಆತನನ್ನು ಸಹಪಾಠಿಗಳು ಮತ್ತು ಹಾಸ್ಟೆಲ್ ಆಡಳಿತ ಮಂಡಳಿಯವರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.
ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಸಂಬಂಧ ಚೆಟ್ಟಿಪಾಳಯಂ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ವಿದ್ಯಾರ್ಥಿ ಪ್ರಭು ಬಿಟೆಕ್ ಮೂರನೇ ವರ್ಷದಲ್ಲಿ ಓದುತ್ತಿದ್ದಾನೆ. ಆತ ತನಗೆ ಸೂಪರ್ ಪವರ್ ಗಳಿವೆ ಎಂದು ಕಲ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಅಲ್ಲದೇ, ಆತ ತಾನು ಯಾವುದೇ ಕಟ್ಟಡದಿಂದ ಬೇಕಾದರೂ ಜಿಗಿಯಬಲ್ಲೆ ಎಂದು ಆಗಾಗ ತನ್ನ ಸ್ನೇಹಿತರ ಮುಂದೆ ಹೇಳುತ್ತಿದ್ದನಂತೆ. ಅದೇ ಭ್ರಮೆಯಲ್ಲಿ ಆತ ಹಾಸ್ಟೆಲ್ ನ 4ನೇ ಮಹಡಿಯಿಂದ ಜಿಗಿದಿದ್ದಾನೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಆತ 4 ನೇ ಮಹಡಿಯಿಂದ ಜಿಗಿಯುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ :ಕುಡಿದ ಮತ್ತಿನಲ್ಲಿ ಗ್ಯಾಸ್ ಸಿಲಿಂಡರ್ ತೆರೆದು ಬೆಂಕಿ ಹಚ್ಚಿದ ಭೂಪ: 11 ಮಂದಿ ಸ್ಥಿತಿ ಗಂಭೀರ