ಚೆನ್ನೈ, ತಮಿಳುನಾಡು: ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿ ಒಳಗೆ ಬಂದಿದ್ಧಾರೆ ಎಂದು ಆರೋಪಿಸಿ ನೆಡುಂಥೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ 18 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ ಬಂಧಿಸಿದೆ. ಈ ಮೀನುಗಾರರು ಶ್ರೀಲಂಕಾದ ಜಲಪ್ರದೇಶವನ್ನು ಪ್ರವೇಶಿಸಿ ಅಕ್ರಮ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಶ್ರೀಲಂಕಾದ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸರು ಹೇಳಿದ್ದಾರೆ.
ಎರಡು ಮೀನುಗಾರಿಕಾ ದೋಣಿಗಳಲ್ಲಿದ್ದ ಬಂಧಿತ ಮೀನುಗಾರರನ್ನು ಹೆಚ್ಚಿನ ತನಿಖೆಗಾಗಿ ಕಂಗೆಸನ್ ನೌಕಾ ನೆಲೆಗೆ ಕರೆದೊಯ್ಯಲಾಗಿದೆ. ಶ್ರೀಲಂಕಾ ನೌಕಾಪಡೆಯು ಪದೇ ಪದೆ ಭಾರತೀಯ ಮೀನುಗಾರರನ್ನು ಬಂಧಿಸುತ್ತಿರುವುದು ಮೀನುಗಾರರ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಇಂಥ ಘಟನೆಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಜೂನ್ 16 ರಿಂದ ಈವರೆಗೆ ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 425 ಮೀನುಗಾರರನ್ನು ಬಂಧಿಸಿದೆ ಮತ್ತು 58 ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಮೀನುಗಾರರ ಪೈಕಿ ಅನೇಕರು ಶ್ರೀಲಂಕಾದ ಜೈಲುಗಳಲ್ಲಿ ಬಂಧನದಲ್ಲಿದ್ದಾರೆ.
ದೋಣಿಗಳನ್ನ ವಶಪಡಿಸಿಕೊಳ್ಳದಂತೆ ಒತ್ತಾಯಿಸಿದ್ದ ವಿದೇಶಾಂಗ ಸಚಿವರು:ಇತ್ತೀಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈ ಬಂಧನಗಳ ವಿಷಯ ಪ್ರಸ್ತಾಪಿಸಿ, ಭವಿಷ್ಯದಲ್ಲಿ ಮತ್ತಷ್ಟು ಭಾರತೀಯರ ಬಂಧನವಾಗದಂತೆ ಮತ್ತು ದೋಣಿ ವಶಪಡಿಸಿಕೊಳ್ಳದಂತೆ ಕ್ರಮ ತೆಗೆದುಕೊಳ್ಳುವಂತೆ ಶ್ರೀಲಂಕಾ ಸರ್ಕಾರಕ್ಕೆ ಒತ್ತಾಯಿಸಿದ್ದರು.