ಲಾತೂರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಸಾರ್ವಜನಿಕ ಶೌಚಾಲಯವೊಂದರಲ್ಲಿ ಕಳೆದ ಎರಡು ವರ್ಷಗಳಿಂದ ವಾಸಿಸುತ್ತಿದ್ದ 45 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬುಲ್ಧಾನಾದ ಆಶ್ರಯ ಮನೆಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಎನ್ಜಿಒ(ಸರ್ಕಾರೇತರ ಸಂಸ್ಥೆ)ದ ಪ್ರತಿನಿಧಿ ತಿಳಿಸಿದ್ದಾರೆ.
ನಿಲಂಗಾ ತಹಸಿಲ್ನ ಗುರಾಲ್ ಗ್ರಾಮದ ನಿವಾಸಿ ಇಂದಾ ಶಿಂಧೆ ಎಂಬವರು 15 ವರ್ಷಗಳ ಹಿಂದೆ ತಮ್ಮ ಪತಿಯಿಂದ ದೂರಾಗಿದ್ದರು. ನಂತರ ಯಾವುದೇ ಆಶ್ರಯವಿಲ್ಲದ ಆಕೆ ಹಳ್ಳಿಯ ಹೊರವಲಯದ ಶೌಚಾಲಯದಲ್ಲಿ ಆಶ್ರಯ ಪಡೆದಿದ್ದಳು. ಕಾಲ ಕಳೆದಂತೆ ಅದನ್ನೇ ತನ್ನ ಮನೆಯೆಂದು ಭಾವಿಸಿ ಆಕೆ ಅಲ್ಲಿಯೇ ಇರತೊಡಗಿದ್ದಳು. ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ವಾಸಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ತಾಯಿಗೆ ತಿಳಿಸದೆಯೇ ಓರ್ವ ಪುತ್ರಿ ಮದುವೆ ಮಾಡಿಕೊಂಡು ದೂರಾದಳು. ಇದರಿಂದ ತೀವ್ರ ಆಘಾತಕ್ಕೊಳಗಾದ ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಳು ಎಂದು ರಿಲಿಜನ್ ಟು ರೆಸ್ಪಾನ್ಸಿಬಿಲಿಟಿ ಫೌಂಡೇಶನ್ ಸದಸ್ಯ ರಾಹುಲ್ ಪಾಟೀಲ ಚಕೂರಕರ್ ಹೇಳಿದರು.
ಕೆಲ ಸಮಯದ ನಂತರ ಮತ್ತೊಬ್ಬ ಮಗಳು ಕೂಡ ಮದುವೆ ಮಾಡಿಕೊಂಡು ತಾಯಿಯಿಂದ ಬೇರ್ಪಟ್ಟಿದ್ದಳು. ಇನ್ನು ಇದ್ದೊಬ್ಬ ಮಗ ಕೂಡ ಮಾನಸಿಕ ಅಸ್ವಸ್ಥನಾಗಿದ್ದಾನೆ. ಅನಾರೋಗ್ಯ ಪೀಡಿತನಾಗಿದ್ದ ಈತನನ್ನು ಮತ್ತೊಂದು ಎನ್ಜಿಒ ಸದಸ್ಯರು ಆಶ್ರಯ ಮನೆಗೆ ಸೇರಿಸಿದ್ದರು. ಇದರ ನಂತರ ಮಹಿಳೆ ಒಂಟಿಯಾಗಿದ್ದಳು. ಮಹಿಳೆಯ ದುಃಸ್ಥಿತಿಯ ಬಗ್ಗೆ ಸ್ಥಳೀಯ ನಿವಾಸಿಗಳು ಚಕುರಕರ್ ಅವರಿಗೆ ಮಾಹಿತಿ ನೀಡಿದ್ದರು.
ಸದ್ಯ ಚಕುರಕರ್ ಅವರ ಪ್ರಯತ್ನದಿಂದಾಗಿ ನವೆಂಬರ್ 30ರಂದು ಮಹಿಳೆಯನ್ನು ಬುಲ್ಧಾನಾ ಜಿಲ್ಲೆಯ ಆಶ್ರಯ ಮನೆಯಾದ ದಿವ್ಯ ಸೇವಾ ಸಂಕಲ್ಪಕ್ಕೆ ಕಳುಹಿಸಲಾಗಿದೆ. ಅಲ್ಲಿ ಆಕೆಗೆ ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ಚಕುರಕರ್ ಹೇಳಿದರು.
ಇದನ್ನೂ ಓದಿ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಕಾಯ್ದೆ ಕ್ರೂರ, ಪರಿಶೀಲನೆ ಅಗತ್ಯ: ಸುಪ್ರೀಂ ಕೋರ್ಟ್