ಬೆಂಗಳೂರು: ಬ್ರಿಟಿಷ್ ಟೆಲಿಕಾಂ ಕಂಪನಿ ವೊಡಾಫೋನ್ ಇಂಡಸ್ ಟವರ್ಸ್ನಲ್ಲಿನ ತನ್ನ ಶೇ 3ರಷ್ಟು ಪಾಲನ್ನು ಮಾರಾಟ ಮಾಡಲಿದೆ. ಪಾಲು ಮಾರಾಟದಿಂದ ಬಂದ ಹಣವನ್ನು ತನ್ನ 101 ಮಿಲಿಯನ್ ಡಾಲರ್ ಅಥವಾ ಸುಮಾರು 856 ಕೋಟಿ ರೂ.ಗಳ ಸಾಲ ತೀರಿಸಲು ಕಂಪನಿ ಬಳಸಲಿದೆ.
ಬುಧವಾರದಂದು ಬಿಎಸ್ಇಯಲ್ಲಿ ಇಂಡಸ್ ಟವರ್ಸ್ ಷೇರುಗಳ ಮುಕ್ತಾಯದ ಬೆಲೆ 358.75 ರೂ. ಆಗಿದ್ದು, 2,841 ಕೋಟಿ ರೂ. ಮೌಲ್ಯದ ಷೇರು ವಹಿವಾಟು ನಡೆದಿದೆ.
"ವೊಡಾಫೋನ್ ಗ್ರೂಪ್ ಪಿಎಲ್ಸಿ ಇಂಡಸ್ ಟವರ್ಸ್ನಲ್ಲಿ ಉಳಿದ ತನ್ನ 79.2 ಮಿಲಿಯನ್ ಷೇರುಗಳನ್ನು ಮಾರಾಟಕ್ಕೆ ಇಡಲು ಪ್ರಾರಂಭಿಸಿದೆ ಎಂದು ಈ ಮೂಲಕ ಘೋಷಿಸುತ್ತದೆ." ಎಂದು ವೊಡಾಫೋನ್ ನಿಯಂತ್ರಕ ಪ್ರಾಧಿಕಾರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ. ಈ ಮಾರಾಟದ ನಂತರ ಇಂಡಸ್ ಟವರ್ಸ್ನಲ್ಲಿ ವೊಡಾಫೋನ್ ಪಾಲು ಶೇಕಡಾ 1 ಕ್ಕಿಂತ ಕಡಿಮೆಯಾಗಲಿದೆ. ಈ ವಹಿವಾಟಿಗೆ ಮೊದಲು ವೊಡಾಫೋನ್ ಇಂಡಸ್ ಟವರ್ಸ್ನಲ್ಲಿ 82.5 ಮಿಲಿಯನ್ ಷೇರುಗಳನ್ನು ಅಥವಾ ಶೇಕಡಾ 3.1 ರಷ್ಟು ಪಾಲನ್ನು ಹೊಂದಿತ್ತು.
ಜೂನ್ನಲ್ಲಿ ವೊಡಾಫೋನ್ ಇಂಡಸ್ ಟವರ್ಸ್ನ ಶೇಕಡಾ 18 ರಷ್ಟು ಪಾಲನ್ನು ಸುಮಾರು 15,300 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಪಾಲು ಮಾರಾಟದಿಂದ ಬರುವ ಮೊತ್ತವನ್ನು ವೊಡಾಫೋನ್ ನ ಭಾರತೀಯ ಸ್ವತ್ತುಗಳ ಮೇಲೆ ಪಡೆಯಲಾಗಿರುವ 101 ಮಿಲಿಯನ್ ಡಾಲರ್ ಸಾಲ ಮರುಪಾವತಿಗೆ ಬಳಸಲಾಗುವುದು ಎಂದು ಕಂಪನಿ ಹೇಳಿದೆ.
ವೊಡಾಫೋನ್ ಮತ್ತು ಇಂಡಸ್ ನಡುವಿನ ಭದ್ರತಾ ವ್ಯವಸ್ಥೆಗಳ ನಿಯಮಗಳ ಅಡಿಯಲ್ಲಿ, ಮಾಸ್ಟರ್ ಸರ್ವೀಸಸ್ ಒಪ್ಪಂದಗಳ (ಎಂಎಸ್ಎ) ಅಡಿಯಲ್ಲಿ ವೊಡಾಫೋನ್ ಐಡಿಯಾದಿಂದ ಇಂಡಸ್ಗೆ ಬಾಧ್ಯತೆಗಳನ್ನು ಖಾತರಿಪಡಿಸುವ ಆದಾಯದ ಮೇಲೆ ಇಂಡಸ್ ಭದ್ರತೆಯನ್ನು ಹೊಂದಿದೆ. ಇಂಡಸ್ ಟವರ್ಸ್ನಲ್ಲಿ ವೊಡಾಫೋನ್ನ ಉಳಿದ ಪಾಲು ಟೆಲಿಕಾಂ ಟವರ್ ಸಂಸ್ಥೆಗಳಿಗೆ ಎಂಎಸ್ಎ ಅಡಿಯಲ್ಲಿ ವಿಐನ ಬಾಧ್ಯತೆಗಳನ್ನು ಖಾತರಿಪಡಿಸಲು ಲಭ್ಯವಿರುತ್ತದೆ.
ಸ್ಪ್ಯಾಮ್ ಬ್ಲಾಕಿಂಗ್ ಸೇವೆ ಆರಂಭಿಸಿದ ವೊಡಾಫೋನ್: ತನ್ನ ಗ್ರಾಹಕರಿಗೆ ಸ್ಪ್ಯಾಮ್ ಬ್ಲಾಕಿಂಗ್ ಸೇವೆಯನ್ನು ಆರಂಭಿಸಿರುವುದಾಗಿ ವೊಡಾಫೋನ್ ಐಡಿಯಾ (ವಿ) ಸೋಮವಾರ ಘೋಷಿಸಿದೆ. ಭಾರ್ತಿ ಏರ್ಟೆಲ್ ಮತ್ತು ಬಿಎಸ್ಎನ್ಎಲ್ನಂತೆ ವಿಐನ ಸ್ಪ್ಯಾಮ್ ಫಿಲ್ಟರ್ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ತಂತ್ರಜ್ಞಾನವನ್ನು ಆಧರಿಸಿ ಕೆಲಸ ಮಾಡುತ್ತದೆ. ಈ ತಂತ್ರಜ್ಞಾನವು ಈಗಾಗಲೇ 24 ಮಿಲಿಯನ್ ಸ್ಪ್ಯಾಮ್ ಟೆಕ್ಸ್ಟ್ಗಳನ್ನು ಗುರುತಿಸಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್ಗಳ ಸ್ಥಾಪನೆ; ಈಗ ಉಳಿದಿರುವುದು ಕೇವಲ 2 ಮಾತ್ರ