ಬೆಳಗಾವಿ: ಕೃಷ್ಣಾ ನದಿಯಲ್ಲಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಹಾರೂಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಮೃತನ ಪತ್ನಿ, ಅವಳ ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಈ ಕುರಿತು ಮಾಹಿತಿ ನೀಡಿ, "2023ರ ಡಿ.27ರಂದು ಅಥಣಿ ತಾಲೂಕಿನ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಆ ವೇಳೆ ಮೃತ ವ್ಯಕ್ತಿಯ ಚಹರೆಯನ್ನು ಅಕ್ಕ ಪಕ್ಕದ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೇ ಸಂದರ್ಭದಲ್ಲಿ ರಾಯಭಾಗ ತಾಲೂಕಿನ ಇಟನಾಳ ಗ್ರಾಮದ ಯುವಕನೊಬ್ಬ ಕಾಣೆಯಾಗಿರುವ ವಿಚಾರ ಗೊತ್ತಾಗಿತ್ತು. ಆದರೆ, ಆ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಇದರಿಂದ ಅನುಮಾನಗೊಂಡು ನಮ್ಮ ಹಾರೂಗೇರಿ ಪೊಲೀಸರು ತನಿಖೆ ನಡೆಸಿದಾಗ ಕೃಷ್ಣಾ ನದಿಯಲ್ಲಿ ಮೃತಪಟ್ಟಿದ್ದು ಮಲ್ಲಪ್ಪ ಕಂಬಾರ ಎಂದು ಸ್ಪಷ್ಟವಾಯಿತು. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಮೃತ ಮಲ್ಲಪ್ಪನ ಪತ್ನಿ ದಾನವ್ವ, ಅವರ ಪ್ರಿಯಕರ ಪ್ರಕಾಶ್ ಬೆನ್ನಾಳಿ, ರಾಮಪ್ಪ ಮಾದರ ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ" ಎಂದರು.
"ಒಂದೂವರೆ ವರ್ಷದ ಹಿಂದೆ ದಾನವ್ವ ಕಾಣೆಯಾಗಿರುವ ಕುರಿತು ಅವರ ತಂದೆ ಪೊಲೀಸರಿಗೆ ದೂರು ದಾಖಲಿಸಿದ್ದರು. ಆ ವೇಳೆ ಮನೆಗೆ ವಾಪಸ್ಸು ಬಂದಿದ್ದ ಆ ಮಹಿಳೆ ಪೊಲೀಸ್ ಠಾಣೆಗೆ ಬಂದು ನನ್ನ ಪತಿ ಮಲ್ಲಪ್ಪನ ಗಲಾಟೆಗೆ ಬೇಸತ್ತು ಓಡಿ ಹೋಗಿದ್ದೆ ಎಂದು ಹೇಳಿಕೆ ಕೊಟ್ಟಿದ್ದಳು. ಆದರೆ, ಆಕೆ ಪ್ರಕಾಶ್ ಬೆನ್ನಾಳಿ ಜೊತೆ ಓಡಿಹೋಗಿದ್ದ ವಿಚಾರ ಪತಿ ಮಲ್ಲಪ್ಪ ಅವರಿಗೆ ತಿಳಿಯಿತು. ಇದೇ ವಿಚಾರಕ್ಕೆ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಪ್ರತಿ ದಿನವೂ ಜಗಳ ಆಗುತ್ತಿತ್ತು. ಅಲ್ಲದೇ ನನ್ನ ಪತ್ನಿ ಸಹವಾಸ ಬಿಡುವಂತೆ ಪ್ರಕಾಶನಿಗೂ ಮಲ್ಲಪ್ಪ ಎಚ್ಚರಿಕೆ ಕೊಟ್ಟಿದ್ದ. ಇದರಿಂದ ತಮ್ಮ ಸಂಬಂಧಕ್ಕೆ ಮಲ್ಲಪ್ಪ ಅಡ್ಡಿಯಾಗಿದ್ದು, ಈತನನ್ನು ಮುಗಿಸಲೇಬೇಕೆಂದು ನಿರ್ಧರಿಸಿದ ದಾನವ್ವ ಮತ್ತು ಪ್ರಕಾಶ್, ರಾಮಪ್ಪನ ನೆರವಿನಿಂದ ಮಲ್ಲಪ್ಪನನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು" ಎಂದು ತಿಳಿಸಿದರು.
ಇದನ್ನೂ ಓದಿ: ಒಂದೇ ಕುಟುಂಬದ ಮೂವರನ್ನು ಇರಿದು ಹತ್ಯೆ ಮಾಡಿದ ಅಪರಿಚಿತ: ಬೆಚ್ಚಿ ಬಿದ್ದ ಮಹಾನಗರಿ ಜನ