ತನ್ನ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ 'ಕರಾವಳಿ'. ಕರ್ನಾಟಕ ಕರಾವಳಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸುಳಿವನ್ನು ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್ಗಳು ಬಿಟ್ಟುಕೊಟ್ಟಿವೆ. ಸ್ಯಾಂಡಲ್ವುಡ್ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರ ನಿರ್ವಹಿಸಿರುವ ಈ 'ಕರಾವಳಿ' ಸಿನಿಮಾಗೆ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಈಗಾಗಲೇ ತನ್ನ ಫಸ್ಟ್ ಲುಕ್, ಪೋಸ್ಟರ್ಸ್ ಮೂಲಕ ಸಿನಿಮಾ ನೋಡುವ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡ ವಿಶೇಷ ವಿಡಿಯೋ ಒಂದನ್ನು ಅನಾವರಣಗೊಳಿಸಿದೆ.
ಫಸ್ಟ್ ಲುಕ್ನಿಂದಲೇ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ಕರಾವಳಿ ಸಿನಿಮಾದ ಚಿತ್ರೀಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಸದ್ಯ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಸಿನಿಮಾ ಟೀಂ ಉಡುಪಿಯಲ್ಲಿ ಬೀಡುಬಿಟ್ಟಿದೆ. ಸತತ ಒಂದು ತಿಂಗಳುಗಳ ಕಾಲ ಉಡುಪಿಯಲ್ಲಿಯೇ ಚಿತ್ರೀಕರಣ ಮಾಡಲಿದ್ದು, ಸಿನಿಮಾಗೆ ಬೇಕಿರೋ ಕಂಬಳದ ಚಿತ್ರೀಕರಣ ನಡೆಯುತ್ತಿದೆ.
ಪ್ರಸ್ತುತ ಮಂಗಳೂರು, ಉಡುಪಿ ಭಾಗದಲ್ಲಿ ಕಂಬಳ ಶುರುವಾಗಿದ್ದು ಚಿತ್ರತಂಡ ಕೂಡ ಕಂಬಳದಲ್ಲಿ ಭಾಗಿಯಾಗಿ ಇಡೀ ಕಂಬಳ ಸ್ಪರ್ಧೆ ನೋಡಿ ಖುಷಿ ಪಟ್ಟಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರು ಈ ಜನಪ್ರಿಯ ಕಂಬಳ ಸ್ಪರ್ಧೆಯನ್ನು ಲೈವ್ ಆಗಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ನಾಯಕ ನಟಿ ಸಂಪದ ಅವರೂ ಕೂಡಾ ಇದೇ ಮೊದಲ ಬಾರಿಗೆ ಕಂಬಳವನ್ನು ಕಣ್ತುಂಬಿಕೊಂಡ ಖುಷಿಯಲ್ಲಿದ್ದಾರೆ.
ಇದನ್ನೂ ಓದಿ: 'ಹೆಣ್ಣುಮಕ್ಕಳ ಹಿಂದೆ ಬಿದ್ದಿರೋ ....': ಬೆಂಕಿ ಹೊತ್ತಿಸಿದ ತ್ರಿವಿಕ್ರಮ್, ಚೈತ್ರಾ; 'ಇಲ್ಲಿರಲ್ಲ' ಎಂದ ಶಿಶಿರ್
ಚಿತ್ರತಂಡ ಈಗಾಗಲೇ ಹಲವು ಪೋಸ್ಟರ್ಗಳನ್ನು ಅನಾವರಣಗೊಳಿಸಿದ್ದು, ನಾಯಕ ನಟ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆ, ಅವರು ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ನಟನ ಪಾತ್ರ ತಿಳಿದುಕೊಳ್ಳಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ನಲ್ಲೇ 100 ಕೋಟಿ ದಾಟಿದ 'ಪುಷ್ಪ 2': ಮೊದಲ ದಿನವೇ 275 ಕೋಟಿ ಗಳಿಸುವ ಸಾಧ್ಯತೆ
ಕರಾವಳಿ ಚಿತ್ರತಂಡ ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿಸಿಕೊಂಡಿದೆ. ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತವೇ ಚಿತ್ರೀಕರಣಗೊಂಡಿದೆ. ಸಿನಿಮಾಗೆ ಗುರುದತ್ ಗಾಣಿಗ ಅವರ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರದ್ದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ನಲ್ಲಿ ಈ ಬಹುನಿರೀಕ್ಷಿತ ನಿರ್ಮಾಣ ಆಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಗ್ರಾಮೀಣ ಬ್ಯಾಕ್ ಡ್ರಾಪ್ನಲ್ಲಿ ಸಿನಿಮಾ ಮೂಡಿ ಬರಲಿದೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಿ, ಪ್ರಚಾರ ಪ್ರಾರಂಭಿಸುವ ಯೋಜನೆಯಲ್ಲಿ ಚಿತ್ರತಂಡವಿದ್ದರೆ, ಸಿನಿಮಾ ನೋಡುವ ಕಾತರದಲ್ಲಿ ಪ್ರೇಕ್ಷಕರಿದ್ದಾರೆ.