ನವದೆಹಲಿ: ಸಿಬ್ಬಂದಿ ಕೊರತೆ ಮತ್ತು ಆರ್ಥಿಕ ಇಲಾಖೆಯ ಮೇಲಿನ ಹೊರೆ ತಗ್ಗಿಸುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಅದೇ ರೀತಿ, ಇದೀಗ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನೂ ಏರಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿತ್ತು. ಇದಕ್ಕೆ ಇಂದು ಲೋಕಸಭೆಯಲ್ಲಿ ಸ್ಪಷ್ಟೀಕರಣ ನೀಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಬದಲಾವಣೆ ಕುರಿತ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ 60 ವರ್ಷವಿದ್ದು, ಇದೇ ನಿಯಮ ಮುಂದುವರೆಯಲಿದೆ. ಸರ್ಕಾರದ ಮುಂದೆ ವಯಸ್ಸಿನ ಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾವನೆಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಲಿಖಿತ ಉತ್ತರ ನೀಡಿದರು.
ಕೇಂದ್ರ ಸರ್ಕಾರ ಯುವ ಜನರಿಗೆ ಉದ್ಯೋಗ ಒದಗಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಚಿವಾಲಯಗಳು ಹಾಗೂ ಕೇಂದ್ರದ ಇಲಾಖೆಗಳಲ್ಲಿ ಕಾಲಕಾಲಕ್ಕೆ ನೇಮಕಾತಿ ನಡೆಸಲಾಗುತ್ತಿದೆ. ಈ ಮೂಲಕ ಖಾಲಿ ಇರುವ ಹುದ್ದೆಗಳನ್ನು ನಿಗದಿತ ಸಮಯದಲ್ಲಿ ಭರ್ತಿ ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ನಿರ್ವಹಣೆ ಮತ್ತು ಸ್ವಾಯತ್ತ ಮಂಡಳಿ, ಶಿಕ್ಷಣ ಸಂಸ್ಥೆ ಹಾಗೂ ಆರೋಗ್ಯ ವಲಯದಲ್ಲಿ ಯುವ ಜನತೆಗೆ ಉದ್ಯೋಗ ಒದಗಿಸಲು ರೋಜಗರ್ ಮೇಳ ಆಯೋಜಿಸಲಾಗಿದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಕಾಯ್ದೆ ಕ್ರೂರ, ಪರಿಶೀಲನೆ ಅಗತ್ಯ: ಸುಪ್ರೀಂ ಕೋರ್ಟ್