ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಖ್ ವ್ಯಕ್ತಿ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಶ್ರೀನಗರದಲ್ಲಿ ಇಂದು ಸಂಜೆ ನಡೆದಿದೆ. ಪಂಜಾಬ್ನ ಅಮೃತಸರ ಮೂಲದ ಅಮೃತಪಾಲ್ ಸಿಂಗ್ ಮೃತರು. ಗಾಯಾಳು ರೋಹಿತ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಶಾಲ್ ಕಡಲ್ ಪ್ರದೇಶದ ಕರ್ಫಾಲಿ ಮೊಹಲ್ಲಾದಲ್ಲಿ 7 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಅಪರಿಚಿತ ಉಗ್ರರು ಹತ್ತಿರದಿಂದಲೇ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಅಮೃತಪಾಲ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಗಳು ಸ್ಥಳಕ್ಕೆ ದೌಡಾಯಿಸಿವೆ. ದುಷ್ಕರ್ಮಿಗಳನ್ನು ಬಂಧಿಸಲು ಇಡೀ ಪ್ರದೇಶವನ್ನು ಸುತ್ತುವರಿದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
''ಶ್ರೀನಗರದ ಶಹೀದ್ ಗುಂಜ್ನಲ್ಲಿ ಅಮೃತಸರದ ಅಮೃತಪಾಲ್ ಸಿಂಗ್ ಎಂಬ ಸ್ಥಳೀಯರಲ್ಲದವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಗಾಯಗೊಂಡು ಅವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ'' ಎಂದು ಕಾಶ್ಮೀರ ವಲಯ ಪೊಲೀಸರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಶ್ರೀನಗರದಲ್ಲಿ ಅಮೃತ್ ಪಾಲ್ ಸಿಂಗ್ ಪ್ರಾಣ ಕಳೆದುಕೊಂಡ ಘಟನೆಯಿಂದ ಜೆಕೆಎನ್‌ಸಿ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆಘಾತಕ್ಕೊಳಗಾಗಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸಿದ್ದಾರೆ. ನಮ್ಮ ಸಮಾಜದಲ್ಲಿ ಹಿಂಸಾಚಾರಕ್ಕೆ ಯಾವುದೇ ಅಸ್ಪದ ಇಲ್ಲ. ಇಂತಹ ಅನಾಗರಿಕ ಕೃತ್ಯಗಳು ನಾವು ಶ್ರಮಿಸುತ್ತಿರುವ ಪ್ರಗತಿ ಮತ್ತು ಶಾಂತಿಗೆ ಅಡ್ಡಿ" ಎಂದು ಪಕ್ಷದ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮತ್ತೊಂದೆಡೆ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸಹ ದಾಳಿಯನ್ನು ಖಂಡಿಸಿದೆ.
ಕಾಶ್ಮೀರದಲ್ಲಿ ಸ್ಥಳೀಯರಲ್ಲದವರ ಮೇಲೆ 2024ರ ಹೊಸ ವರ್ಷದಲ್ಲಿ ಉಗ್ರರು ನಡೆಸಿದ ಮೊದಲ ದಾಳಿ ಇದಾಗಿದೆ. ಕಳೆದ ವರ್ಷ ಅನಂತನಾಗ್ ಮತ್ತು ಶೋಪಿಯಾನ್ ಜಿಲ್ಲೆಗಳು ಸೇರಿದಂತೆ ಕಣಿವೆಯಲ್ಲಿ ಭಯೋತ್ಪಾದಕರು ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಹಲವು ದಾಳಿಗಳನ್ನು ನಡೆಸಿದ್ದರು. ಮೇ 30ರಂದು ಅನಂತ್‌ನಾಗ್ ಜಿಲ್ಲೆಯಲ್ಲಿ ಉಧಮ್‌ಪುರ ಜಿಲ್ಲೆಯ ಸರ್ಕಸ್ ಕಾರ್ಮಿಕನನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡಿದ್ದರು. ಅಕ್ಟೋಬರ್ 31ರಂದು ಪುಲ್ವಾಮಾ ಜಿಲ್ಲೆಯಲ್ಲಿ ಬಿಹಾರ ಮೂಲಕದ ಇಟ್ಟಿಗೆ ಗೂಡು ಕಾರ್ಮಿಕ ಮುಕೇಶ್ ಕುಮಾರ್ ಎಂಬುವರಿಗೂ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜುಲೈ 13ರಂದು ಶೋಪಿಯಾನ್ ಜಿಲ್ಲೆಯ ಗಾಗ್ರೆನ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದರು.
ಇದನ್ನೂ ಓದಿ:ನಕ್ಸಲರೊಂದಿಗೆ ಗುಂಡಿನ ಚಕಮಕಿ; ಜಾರ್ಖಂಡ್‌ನಲ್ಲಿ ಇಬ್ಬರು ಪೊಲೀಸರು ಹುತಾತ್ಮ