ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಇಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು 500 ರೂ.ಗೆ ನೀಡಿವುದು, ವೃದ್ಧಾಪ್ಯ ಪಿಂಚಣಿ 2500ಕ್ಕೆ ಹೆಚ್ಚಳ ಹಾಗೂ ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೀಡುವುದಾಗಿ ಘೋಷಣೆ ಮಾಡಿದೆ.
ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯ 'ಸಂಕಲ್ಪ ಪತ್ರ'ದ ಮೊದಲ ಭಾಗವನ್ನು ಬಿಡುಗಡೆ ಮಾಡಿದರು. ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮಾಡುವ ಗುರಿ ಹೊಂದಿದ್ದೇವೆ ಎಂದಿರುವ ನಡ್ಡಾ, ಸಂಕಲ್ಪ ಪತ್ರವನ್ನು ವಿಕಸಿತ್ ದೆಹಲಿಯ ಮಾರ್ಗಸೂಚಿ. ಅಭಿವೃದ್ಧಿ ಹೊಂದಿದ ದೆಹಲಿಗೆ ಪಕ್ಷದ ಪ್ರಣಾಳಿಕೆ ಅಡಿಪಾಯವಾಗಿದೆ ಎಂದರು.
ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಸ್ತಿತ್ವದಲ್ಲಿರುವ ಸಾರ್ವಜನಿಕ ಕಲ್ಯಾಣ ಯೋಜನೆಗಳಲ್ಲಿನ ಎಲ್ಲಾ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಬಡ ವರ್ಗದ ಮಹಿಳೆಯರಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡಲಿದೆ. ಹೋಳಿ ಮತ್ತು ದೀಪಾವಳಿಯಂದು ತಲಾ ಒಂದು ಸಿಲಿಂಡರ್ ಆನ್ನು ಉಚಿತವಾಗಿ ನೀಡಲಾಗುವುದು. 60-70 ವರ್ಷದೊಳಗಿನ ಹಿರಿಯ ನಾಗರಿಕರಿಗೆ 2,500 ರೂಪಾಯಿ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3,000 ರೂಪಾಯಿ ಪಿಂಚಣಿ ನೀಡಲಾಗುವುದು ಎಂದು ತಿಳಿಸಿದರು.
ದೆಹಲಿಗರಿಗೆ ರಾಜ್ಯ- ಕೇಂದ್ರದಿಂದ ಒಟ್ಟು 10 ಲಕ್ಷ ರೂ ಆರೋಗ್ಯ ವಿಮೆ: ದೆಹಲಿಯಲ್ಲಿ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಆಯುಷ್ಮಾನ್ ಭಾರತ್ ಯೋಜನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಅದರ ಸಮರ್ಪಕ ಅನುಷ್ಠಾನ ಮಾಡುವುದಾಗಿ ನಡ್ಡಾ ಘೋಷಿಸಿದ್ದಾರೆ. ಈ ಯೋಜನೆಯಡಿ ದೆಹಲಿ ಸರ್ಕಾರವು ಪ್ರತ್ಯೇಕವಾಗಿ ₹ 500000 ವಿಮೆಯನ್ನು ನೀಡುತ್ತದೆ ಮತ್ತು ಕೇಂದ್ರ ಸರ್ಕಾರವು ₹ 5 ಲಕ್ಷ ವಿಮೆಯನ್ನು ನೀಡುತ್ತದೆ. ಈ ಮೂಲಕ ದೆಹಲಿ ಜನರಿಗೆ 10 ಲಕ್ಷರೂಗಳ ಆರೋಗ್ಯ ವಿಮೆ ದೊರೆಯಲಿದೆ.
ಬಿಜೆಪಿ ಪ್ರಣಾಳಿಕೆಯ ಘೋಷಣೆಗಳು
- - ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 2500 ರೂ.
- - ಬಡ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್‌ನಲ್ಲಿ ₹ 500 ಸಬ್ಸಿಡಿ
- - ಬಡ ಕುಟುಂಬಗಳಿಗೆ ಹೋಳಿ ಮತ್ತು ದೀಪಾವಳಿಯಂದು ಉಚಿತ ಸಿಲಿಂಡರ್
- - ಗರ್ಭಿಣಿಯರಿಗೆ ₹ 21000ರೂ ಅನುದಾನ
- - 70 ವರ್ಷ ಮೇಲ್ಪಟ್ಟವರಿಗೆ 10 ಲಕ್ಷ ರೂ.ಗಳ ವಿಮಾ ರಕ್ಷಣೆ
- - 60 ರಿಂದ 70 ವರ್ಷ ವಯೋಮಾನದವರ ಪಿಂಚಣಿಯನ್ನು ₹ 500 ಹೆಚ್ಚಳ
- - 70 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರು ಮತ್ತು ವಿಧವೆಯ ಮಹಿಳೆಯರಿಗೆ ₹ 2500 ರ ಬದಲಿಗೆ ₹ 3000 ಪಿಂಚಣಿ
- - ದೆಹಲಿಯಲ್ಲಿ ಅಟಲ್ ಕ್ಯಾಂಟೀನ್ ಯೋಜನೆಯನ್ನು ಪ್ರಾರಂಭಿಸಲಾಗುವುದು, ಇದರ ಅಡಿ ಕೊಳಚೆ ಪ್ರದೇಶಗಳಲ್ಲಿ ₹ 5ಕ್ಕೆ ಆಹಾರ ನೀಡುವುದಾಗಿ ಘೋಷಣೆ
ದೆಹಲಿಯಲ್ಲಿ ಫೆಬ್ರವರಿ 5 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ: ನಾಮಪತ್ರ ಸಲ್ಲಿಸಿದ ಸಿಸೋಡಿಯಾ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದ ಮಾಜಿ ಡಿಸಿಎಂ