ಹೈದರಾಬಾದ್: ಕರ್ನಾಟಕದ ಬೀದರ್‌ನಲ್ಲಿ ಗುರುವಾರ ನಡೆದ ಗುಂಡಿನ ದಾಳಿ ಮತ್ತು ದರೋಡೆಗಳನ್ನು ಬಿಹಾರದಲ್ಲಿ ದರೋಡೆ ಮತ್ತು ಕಳ್ಳತನದ ದೀರ್ಘ ಇತಿಹಾಸ ಹೊಂದಿರುವ ಅಮಿತ್ ಕುಮಾರ್ ನೇತೃತ್ವದ ಕುಖ್ಯಾತ ಗ್ಯಾಂಗ್ ನಡೆಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಗ್ಯಾಂಗ್ ಅಫ್ಜಲ್‌ಗಂಜ್‌ನಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗುವ ಮುನ್ನ ಬೀದರ್‌ನಲ್ಲಿ ಎಟಿಎಂ ದರೋಡೆ ಮಾಡಿ , ರಾಯ್‌ಪುರ ಮೂಲಕ ಬಿಹಾರಕ್ಕೆ ಪಲಾಯನ ಮಾಡಿದೆ ಎಂದು ಪೊಲೀಸರು ಊಹಿಸಿದ್ದಾರೆ.
ತನಿಖೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಿಷ್ಟು: ಪ್ರಕರಣದ ತನಿಖೆಯ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಈ ಗ್ಯಾಂಗ್ ಅನೇಕ ರಾಜ್ಯಗಳಲ್ಲಿ ದರೋಡೆ ಮಾಡಿರುವ ಇತಿಹಾಸ ಹೊಂದಿದೆ. ಆದ್ದರಿಂದ ಅವರ ನಿಖರವಾದ ಮಾರ್ಗವನ್ನು ಪತ್ತೆಹಚ್ಚುವುದು ಒಂದು ಸವಾಲಾಗಿದೆ. ಆದರೂ ಅವರನ್ನು ಸೆರೆ ಹಿಡಿಯಲು ನಾವು ಸುಧಾರಿತ ತಂತ್ರಜ್ಞಾನ ಮತ್ತು ಇತರ ರಾಜ್ಯಗಳ ಪೊಲೀಸ್ ತಂಡಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದರೋಡೆಕೋರರ ಬಂಧನಕ್ಕೆ 10 ವಿಶೇಷ ತಂಡಗಳ ರಚನೆ: ನಗರದಲ್ಲಿ ಗುರುವಾರ ಸಂಚಲನ ಮೂಡಿಸಿದ್ದ ಅಫ್ಜಲಗಂಜ್ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬೀದರ್ ನಲ್ಲಿ ನಡೆದ ಎಟಿಎಂಗೆ ಹಣ ತುಂಬುವ ವಾಹನ ದರೋಡೆ ಪ್ರಕರಣದಲ್ಲಿ ಭಾಗಿಯಾದ ಹಾಗೂ ನಗರದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಸಿದಂತೆ 10 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಹೈದರಾಬಾದ್ ಸೇರಿದಂತೆ ರಾಯ್‌ಪುರ ಮತ್ತು ಬಿಹಾರದ ಶಂಕಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅಫ್ಜಲ್ ಗಂಜ್ ಹಾಗೂ ಬೀದರ್ ನಲ್ಲಿ ಗುಂಡು ಹಾರಿಸಿದವರು ಬಿಹಾರ ಮೂಲದ ಅಮಿತ್ ಕುಮಾರ್ ಗ್ಯಾಂಗ್ ಗೆ ಸೇರಿದವರು ಎಂದು ಪೊಲೀಸರು ಗುರುತಿಸಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದ ಬೀದರ್‌ನಲ್ಲಿ ದರೋಡೆ ನಡೆಸಿ, ಒಬ್ಬನನ್ನು ಗುಂಡಿಕ್ಕಿ ಕೊಂದು, ಇನ್ನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ ಬಳಿಕ ಹೈದರಾಬಾದ್ ನಗರಕ್ಕೆ ನುಗ್ಗಿ ಬಂದು, ಇಲ್ಲಿಂದ ರಾಯಪುರ ಮಾರ್ಗವಾಗಿ ಪರಾರಿಯಾಗಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.
ಟ್ರಾವೆಲ್ ಮ್ಯಾನೇಜರ್ ಮೇಲೆ ಗುಂಡಿನ ದಾಳಿ: ಈ ಗ್ಯಾಂಗ್ ಬೀದರ್ ನಲ್ಲಿ ದರೋಡೆ ನಡೆಸಿ ಹೈದರಾಬಾದ್ ತಲುಪಿದ್ದು ಹೇಗೆ ಎಂಬ ವಿಷಯದ ಮೇಲೆ ಪೊಲೀಸರು ಗಮನ ಕೇಂದ್ರೀಕರಿಸಿದ್ದಾರೆ. ಬಿಹಾರದ ಅಮಿತ್ ಕುಮಾರ್ ಗ್ಯಾಂಗ್ ಅಫ್ಜಲಗಂಜ್‌ನ ರೋಷನ್ ಟ್ರಾವೆಲ್ಸ್ ಮ್ಯಾನೇಜರ್ ಜಹಾಂಗೀರ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಗ್ಯಾಂಗ್ ರಾಯ್‌ಪುರ ಮೂಲಕ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶೂಟಿಂಗ್ ಗ್ಯಾಂಗ್ ಬಿಹಾರಕ್ಕೆ ಪರಾರಿಯಾಗಿದೆಯೇ? ಅಥವಾ ಬೇರೆ ಕಡೆ ಹೋಗಿ ತಲೆಮರೆಸಿಕೊಂಡಿದೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಮಿತ್ ಕುಮಾರ್ ಗ್ಯಾಂಗ್ ಕೈವಾಡ ಶಂಕೆ : ಇದು ಅಮಿತ್ ಕುಮಾರ್ ಗ್ಯಾಂಗ್ ಎಂಬುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಈತನ ವಿರುದ್ಧ ಬಿಹಾರದಲ್ಲಿ ದರೋಡೆ ಮತ್ತು ಕಳ್ಳತನದ ಹಲವು ಪ್ರಕರಣಗಳಿವೆ ಎಂಬುದನ್ನು ತೆಲಂಗಾಣ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿಎಸ್, ಟಾಸ್ಕ್ ಫೋರ್ಸ್ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಬಿಹಾರ ಪೊಲೀಸರನ್ನು ಸಂಪರ್ಕಿಸಿದ ನಂತರ ನಗರ ಪೊಲೀಸ್‌ನ ಉನ್ನತ ಅಧಿಕಾರಿಗಳು ಈಗಾಗಲೇ ಅಮಿತ್ ಕುಮಾರ್ ಅವರ ಅಪರಾಧದ ದಾಖಲೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಶಂಕಿತ ಮಾಸ್ಟರ್‌ಮೈಂಡ್ ಅಮಿತ್ ಕುಮಾರ್ ಈಗಾಗಲೇ ಬಿಹಾರದಲ್ಲಿ ಹಲವಾರು ಉನ್ನತ ಮಟ್ಟದ ದರೋಡೆ ಮತ್ತು ಕಳ್ಳತನ ಪ್ರಕರಣಗಳಿಗೆ ಬೇಕಾಗಿರುವ ಅಪರಾಧಿಯಾಗಿದ್ದಾನೆ. ಗ್ಯಾಂಗ್ ಸರಣಿ ದರೋಡೆಗೆ ಪ್ಲ್ಯಾನ್ ಮಾಡಿತ್ತಾ ಹಾಗೂ ಅವರಿಗೆ ತಪ್ಪಿಸಿಕೊಳ್ಳಲು ಸ್ಥಳೀಯರು ಯಾರಾದರೂ ಸಹಾಯ ಮಾಡಿದ್ರಾ ಎನ್ನುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೀದರ್ ಬ್ಯಾಂಕ್ ದರೋಡೆ: ಗುಂಡಿನ ದಾಳಿಗೆ ಬಲಿಯಾದ ಸಂತ್ರಸ್ತ ಕುಟುಂಬದವರನ್ನ ಭೇಟಿಯಾದ ಖಂಡ್ರೆ