ಬರೇಲಿ( ಉತ್ತರ ಪ್ರದೇಶ): ನಕಲಿ ಪ್ರಮಾಣಪತ್ರಗಳನ್ನು ಕೊಟ್ಟು ಸರ್ಕಾರಿ ಶಿಕ್ಷಕಿಯಾಗಿ ನೇಮಕಗೊಂಡಿದ್ದ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆ 2015ರಲ್ಲಿ ನಕಲಿ ಪ್ರಮಾಣಪತ್ರಗಳನ್ನು ಕೊಟ್ಟು ಸಹಾಯಕ ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಈ ವಿಚಾರ 9 ವರ್ಷಗಳ ನಂತರ ಅಂದರೆ 2024 ಅಕ್ಟೋಬರ್ನಲ್ಲಿ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಈ ಸಂಬಂಧ ಜಿಲ್ಲಾ ಶಿಕ್ಷಣಾಧಿಕಾರಿ ನಕಲಿ ಸಹಾಯಕ ಶಿಕ್ಷಕಿ ಶುಮೈಲಾ ಖಾನ್ ಎಂಬುವವರನ್ನು ಅಮಾನತುಗೊಳಿಸಿದ್ದರು. ಇದೀಗ ಈ ಪ್ರಕರಣ ಸಂಬಂಧ ನಕಲಿ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಮಾನತುಗೊಂಡಿದ್ದ ಸಹಾಯಕ ಶಿಕ್ಷಕಿ ಶುಮೈಲಾ ಖಾನ್ ವಿರುದ್ಧ ತಾಲೂಕು ಶಿಕ್ಷಣಾಧಿಕಾರಿ ಫತೇಗಂಜ್ ವೆಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮಹಿಳೆ ನಕಲಿ ಜನನ ಮತ್ತು ವಾಸಸ್ಥಳ ಪ್ರಮಾಣಪತ್ರ ಕೊಟ್ಟು ಸಹಾಯಕ ಶಿಕ್ಷಕಿ ಹುದ್ದೆಗೆ ನೇಮಕಾತಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಅವರಿಗೆ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೂಲಂಕಷವಾಗಿ ತನಿಖೆ ನಡೆಸಿದಾಗ, ರಾಂಪುರದ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಶುಮೈಲಾ ಖಾನ್‌ಗೆ ನೀಡಿದ್ದ ವಾಸಸ್ಥಳ ಪ್ರಮಾಣಪತ್ರ ನಕಲಿ ಮತ್ತು ಅವರು ಪಾಕಿಸ್ತಾನಿ ಪ್ರಜೆ ಎಂದು ತಿಳಿದು ಬಂದಿದೆ.
ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಬರೇಲಿ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು, ಶುಮೈಲಾ ಖಾನ್ ಪಾಕಿಸ್ತಾನಿ ಪ್ರಜೆ ಮತ್ತು ಅವರು ನೀಡಿದ ಪ್ರಮಾಣಪತ್ರವು ಅಮಾನ್ಯವಾಗಿದೆ ಎಂದು ಖಚಿತ ಪಡಿಸಿದ್ದಾರೆ. ತಾಲೂಕು ಶಿಕ್ಷಣಾಧಿಕಾರಿ ಅವರು ಫತೇಗಂಜ್ ವೆಸ್ಟ್ನ ಪೊಲೀಸ್ ಠಾಣೆಗೆ ಜನವರಿ 10 ರಂದು ಎಫ್‌ಐಆರ್ ದಾಖಲಿಸಿದ್ದರು. ಶುಮೈಲಾ ಖಾನ್ ಅವರು ನಕಲಿ ದಾಖಲೆಗಳ ಆಧಾರದ ಮೇಲೆ ನೇಮಕಾತಿಯಾಗಿ ಸರ್ಕಾರಿ ಕೆಲಸ ಮಾಡಿದ್ದು ಶಿಕ್ಷಾರ್ಹ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬರೇಲಿ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, "ಶುಮೈಲಾ ಖಾನ್ ಅವರು ಮಾಧೋಪುರದ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಸಂಬಳ ಪಡೆದಿದ್ದಾರೆ. ಅವರನ್ನು ಈಗ ಹುದ್ದೆಯಿಂದ ತೆಗೆದುಹಾಕಲಾಗಿದೆ" ಎಂದು ತಿಳಿಸಿದ್ದಾರೆ.
"ಫತೇಗಂಜ್ ವೆಸ್ಟ್ ಪೊಲೀಸ್ ಠಾಣೆಯಲ್ಲಿ ಪಾಕಿಸ್ತಾನದ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಚಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ಶಂಕಿತ ಮುಂಬೈ ಪೊಲೀಸ್ ವಶಕ್ಕೆ?
ಇದನ್ನೂ ಓದಿ: ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್