ಕರ್ನಾಟಕ

karnataka

ETV Bharat / bharat

ನೀರಿನ ಹೆಡ್​ ಟ್ಯಾಂಕರ್​ ಹತ್ತಿ ಎಸ್​ಐ ನೇಮಕಾತಿ ವಿರುದ್ಧ ಅಭ್ಯರ್ಥಿಗಳ ಪ್ರತಿಭಟನೆ - YOUTHS CLIMBED ON A TANK

ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾದ ಎಸ್​ಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಇಬ್ಬರು ಅಭ್ಯರ್ಥಿಗಳು ವಿಶಿಷ್ಟವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಎಸ್​ಐ ನೇಮಕಾತಿ ವಿರುದ್ಧ ಅಭ್ಯರ್ಥಿಗಳ ಪ್ರತಿಭಟನೆ
ಎಸ್​ಐ ನೇಮಕಾತಿ ವಿರುದ್ಧ ಅಭ್ಯರ್ಥಿಗಳ ಪ್ರತಿಭಟನೆ (ETV Bharat)

By ETV Bharat Karnataka Team

Published : Nov 11, 2024, 8:05 PM IST

ಜೈಪುರ (ರಾಜಸ್ಥಾನ):ರಾಜಸ್ಥಾನದಲ್ಲಿ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ರಾಜ್ಯಾದ್ಯಂತ ಪರೀಕ್ಷಾರ್ಥಿಗಳಿಂದ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇಬ್ಬರು ಆಕಾಂಕ್ಷಿಗಳು ಭಾನುವಾರ ನೀರಿನ ಹೆಡ್​ ಟ್ಯಾಂಕರ್​ ಹತ್ತಿ ಕಳೆದ 24 ಗಂಟೆಯಿಂದ ಧರಣಿ ನಡೆಸುತ್ತಿದ್ದಾರೆ.

ಎಸ್​ಐ ನೇಮಕಾತಿ ಪರೀಕ್ಷೆ ರದ್ದುಗೊಳಿಸಬೇಕು, ತಮಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಬೇಕು ಎಂದು ಯುವಕರಿಬ್ಬರು ಆಗ್ರಹಿಸುತ್ತಿದ್ದಾರೆ. ಪೊಲೀಸರು ಅವರ ನಿಗಾ ಇರಿಸಿದ್ದು, ಕೆಳಗಿಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಪ್ರತಿಭಟನಾಕಾರರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಟ್ಯಾಂಕರ್​ ಮೇಲಿಂದಲೇ ಭಾಷಣ:ಧ್ವನಿವರ್ಧಕದ ಮೂಲಕ ಹೆಡ್​​ ಟ್ಯಾಂಕರ್​ ಮೇಲಿಂದಲೇ ಪ್ರತಿಭಟನಾ ಭಾಷಣ ಮಾಡಿರುವ ವಿಕಾಸ್ ಬಿಧುರಿ ಎಂಬಾತ, ಎಸ್‌ಐ ನೇಮಕಾತಿ ಪತ್ರಿಕೆ ಸೋರಿಕೆಯಲ್ಲಿ ಆರ್‌ಪಿಎಸ್‌ಸಿ ಅಧ್ಯಕ್ಷ ಡಾ. ಭೂಪೇಂದ್ರ ಸಿಂಗ್, ಸಂಜಯ್ ಕ್ಷೋತ್ರಿಯ ಮತ್ತು ಸದಸ್ಯೆ ಮಂಜು ಶರ್ಮಾ ಭಾಗಿಯಾಗಿರುವುದು ಬಹಿರಂಗವಾಗಿದೆ. ಸಿಎಂ ಭಜನ್‌ಲಾಲ್ ಅವರು ಎಷ್ಟು ದಿನ ಇವರನ್ನು ಉಳಿಸುತ್ತಾರೆ?. ಕೂಡಲೇ ಪರೀಕ್ಷೆಯನ್ನು ರದ್ದು ಮಾಡಬೇಕು ಎಂದು ಕೋರಿದ್ದಾರೆ.

ನ್ಯಾಯಸಮ್ಮತವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಟ್ಯಾಂಕರ್​ ಹತ್ತಿದ್ದೇವೆ. ಯಾರಿಗೂ ಹಿಂಸೆ ನೀಡುವುದು ನಮ್ಮ ಉದ್ದೇಶವಲ್ಲ. ಸಾಮರ್ಥ್ಯದ ಆಧಾರದ ಮೇಲೆ ಕೆಲಸ ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ರಕ್ತ ಕುದಿಯುತ್ತಿದೆ. ಕಣ್ಣೀರು ಬರುತ್ತದೆ. ನಮ್ಮ ಕಷ್ಟಗಳು ನಮ್ಮ ಹೆತ್ತವರಿಗೆ ಮಾತ್ರ ಗೊತ್ತು. ಕೃಷಿ ಮತ್ತು ಕೂಲಿ ಮಾಡಿ ಅವರು ನಮ್ಮನ್ನು ಓದಿಸಿದ್ದಾರೆ. ಇಂತಹ ಅಕ್ರಮಗಳಿಂದ ನಮಗೆ ಕೆಲಸವೇ ಸಿಗುತ್ತಿಲ್ಲ ಎಂದು ಆಪಾದಿಸಿದರು.

ತಿಂಗಳ ಪೂರ್ವವೇ ಪೇಪರ್​ ಲೀಕ್​:ಎಸ್​ಐ ಪ್ರಶ್ನೆಪತ್ರಿಕೆಯು ಪರೀಕ್ಷೆಗೂ ಒಂದು ತಿಂಗಳ ಮುಂಚೆಯೇ ಸೋರಿಕೆಯಾಗಿದೆ ಎಂದು ಆಪಾದಿಸಿರುವ ಯುವಕರು, 24 ಗಂಟೆಗಳಿಂದ ಊಟ, ನೀರು ಬಿಟ್ಟು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಭೇಟಿಗೆ ಅಧಿಕಾರಿಗಳು ಸಮಯ ನೀಡುತ್ತಿಲ್ಲ. ಒಬ್ಬರ ಪರವಾಗಿ ಮತ್ತೊಬ್ಬರು ಪರೀಕ್ಷೆ ಬರೆದಿದ್ದಾರೆ. 40 ಲಕ್ಷ ರೂಪಾಯಿಗೆ ಪೇಪರ್ ಮಾರಾಟವಾಗಿದೆ. 30 ದಿನ ಮುಂಚಿತವಾಗಿ ಪ್ರಶ್ನೆ ಪತ್ರಿಗೆ ಆರೋಪಿಗಳಿಗೆ ಸಿಕ್ಕಿದೆ. ಇದು ಗೊತ್ತಿದ್ದರೂ, ತನಿಖಾ ಸಂಸ್ಥೆಗಳು ಏನೂ ಕ್ರಮ ಜರುಗಿಸಿಲ್ಲ ಎಂದು ದೂರಿದರು.

2021ರಿಂದ ನಿರುದ್ಯೋಗಿ ಯುವಕರು ಈ ನೋವನ್ನು ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವುದು ಅಪರಾಧವಾದರೆ, ಎಲ್ಲ ಶಿಕ್ಷೆಯನ್ನು ಎದುರಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ. ಟ್ಯಾಂಕರ್​ ಮೇಲೆ ಯುವಕರು ಪ್ರತಿಭಟನಾ ಬ್ಯಾನರ್​ ಅಳವಡಿಸಿ, ಅದರಲ್ಲಿ ಬೇಡಿಕೆಗಳನ್ನು ಮಂಡಿಸಿದ್ದಾರೆ.

ಇದನ್ನೂ ಓದಿ:ಭಾರತ್​ ಜೋಡೋ ಯಾತ್ರೆ, ವಯನಾಡಿನಲ್ಲಿ ನಿಜವಾದ 'ಪ್ರೀತಿ' ಕಂಡೆ: ರಾಹುಲ್​ ಗಾಂಧಿ

ABOUT THE AUTHOR

...view details