ಅಮೃತ್ಸರ: ಪಂಜಾಬ್ನ ಅಮೃತ್ಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಮುಂದೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸುವ ಯತ್ನ ನಡೆಸಲಾಗಿದ್ದು, ಶಿರೋಮಣಿ ಅಕಾಲಿ ದಳದ ನಾಯಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಲ್ಲಿದ್ದ ಜನರು ತಕ್ಷಣಕ್ಕೆ ಕೃತ್ಯ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಾಜಿ ಡಿಸಿಎಂ ಆಗಿರುವ ಸುಖಬೀರ್ ಸಿಂಗ್ ಸದ್ಯ ಗೋಲ್ಡನ್ ಟೆಂಪಲ್ ಎದುರು ಪ್ರವೇಶ ದ್ವಾರ ಕಾಯುವ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ವೇಳೆ ಬುಧವಾರ ಈ ಕೊಲೆ ಯತ್ನ ನಡೆಸಲಾಗಿದೆ.
ವೀಲ್ ಚೇರ್ನಲ್ಲಿ ನೀಲಿ ಬಣ್ಣದ ಸೇವಾದಾರ್ ಯುನಿಫಾರ್ಮ್ನಲ್ಲಿ ಈಟಿ ಹಿಡಿದ ಸುಖಬೀರ್ ಸಿಂಗ್ ಬಾದಲ್ ತಮ್ಮ ಕರ್ತವ್ಯ ನಿರ್ವಹಿಸುವಾಗ ಗುಂಡಿನ ದಾಳಿಗೆ ಯತ್ನ ನಡೆಸಿರುವ ವಿಡಿಯೋ ಹರಿದಾಡಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ತಕ್ಷಣಕ್ಕೆ ಅಧಿಕಾರಿಗಳು ರಕ್ಷಣಾ ಕ್ರಮಕ್ಕೆ ಆಗಮಿಸಿ, ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನರೇನ್ ಸಿಂಗ್ ಚೌರಾ ಎಂಬ ಉಗ್ರ ಈ ಹಲ್ಲೆ ಯತ್ನ ನಡೆಸಿದ್ದ ಎಂಬುದು ಬೆಳಕಿಗೆ ಬಂದಿದೆ. ಈತ ಅನೇಕ ಪ್ರಕರಣದಲ್ಲಿ ಬೇಕಾದ ಪ್ರಮುಖ ಆರೋಪಿಯಾಗಿದ್ದಾನೆ.
ಘಟನೆ ವೇಳೆ ಸುಖಬೀರ್ ಬಾದಲ್ ಅವರ ಬಳಿ ಬಂದ ಚೌರ ಗುಂಡಿನ ದಾಳಿಗೆ ಮುಂದಾದ ಈ ವೇಳೆ ತಕ್ಷಣಕ್ಕೆ ಜಾಗೃತನಾದ ಸುಖಬೀರ್ ಪಕ್ಕ ನಿಂತಿದ್ದ ಮತ್ತೊಬ್ಬ ಸೇವಾದಾರ ಆತನನ್ನು ತಳ್ಳಿ, ಅಕಾಲಿದಳದ ನಾಯಕನನ್ನು ರಕ್ಷಿಸಿದ್ದಾರೆ.
2007 ರಿಂದ 2017ರ ಸರ್ಕಾರ ಅವಧಿಯಲ್ಲಿ ನಡೆಸಿದ ತಪ್ಪುಗಳಿಗಾಗಿ ಅಕಾಲ್ ತಖ್ತ್ ಜತೇದಾರ್ ಗಿಯಾನಿ ರಘ್ಬೀರ್ ಸಿಂಗ್ ಅವರು ಸುಖಬೀರ್ ಬಾದಲ್ ಸೇರಿದಂತೆ ಇತರ ಅಕಾಲಿ ನಾಯಕರಿಗೆ ಗೋಲ್ಡನ್ ಟೆಂಪಲ್ನಲ್ಲಿ ಸೇವೆ ಸಲ್ಲಿಸುವ ಧಾರ್ಮಿಕ ಶಿಕ್ಷೆಗೆ ಗುರಿಯಾಗಿಸಿದ್ದಾರೆ.