ಬಾಗೇಶ್ವರ(ಉತ್ತರಾಖಂಡ):ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪರರ ಮನೆಗೆ ನುಗ್ಗಿ, ಹಲ್ಲೆ ಮಾಡಿ ಗ್ಯಾಸ್ ಸಿಲಿಂಡರ್ ತೆರೆದು ಬೆಂಕಿ ಹಚ್ಚಿದ್ದು, 11 ಮಂದಿಗೆ ಸುಟ್ಟ ಗಾಯಗಳಾಗಿದೆ. ಇವರಲ್ಲಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಬಾಗೇಶ್ವರದ ಗರುಡ ಅಭಿವೃದ್ಧಿ ಬ್ಲಾಕ್‌ನ ದೇವನಾಯಿ ರಂಕುಡಿ ಗ್ರಾಮದಲ್ಲಿನ ಮಂಗಳವಾರ ರಾತ್ರಿ ನಡೆದಿದೆ. ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಗೇಶ್ವರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೈಜನಾಥ ಪೊಲೀಸ್ ಠಾಣೆ ಪ್ರಭಾರಿ ಪ್ರತಾಪ್ ಸಿಂಗ್ ನಾಗರಕೋಟಿ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, "ಗ್ರಾಮದ ವ್ಯಕ್ತಿಯೊಬ್ಬ ಕುಡಿದು ತನ್ನದಲ್ಲದ ಮನೆಯೊಂದಕ್ಕೆ ಬಂದು ಆ ಮನೆಯ ಸದಸ್ಯರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದನು. ಈ ವೇಳೆ ಕುಡುಕ ವ್ಯಕ್ತಿ ಓರ್ವನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ತಕ್ಷಣ ಮನೆ ಮಂದಿಯೆಲ್ಲಾ ಸೇರಿ ಆತನನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಆತನ ಮನೆಯವರಿಗೆ ಮಾಹಿತಿ ನೀಡಿದ್ದರು".
"ಈ ವೇಳೆ ವ್ಯಸನಿ ತಾನಿದ್ದ ಕೊಠಡಿಯಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ತೆರೆದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಇದರಿಂದ ಮನೆಯೊಳಗಿದ್ದ ಕುಟುಂಬದವರಿಗೆಲ್ಲಾ ಸುಟ್ಟ ಗಾಯಗಳಾಗಿವೆ. ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಎಲ್ಲ ಗಾಯಾಳುಗಳನ್ನು ಬೈಜನಾಥ್‌ಗೆ ಕರೆದೊಯ್ದು, ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಗಂಭೀರ ಗಾಯಗೊಂಡ 10 ಜನರನ್ನು ಬಾಗೇಶ್ವರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರ್‍ಯಾಗಿಂಗ್ : 'ಬಾಗಿಲು ಮುಚ್ಚಿ ರಾತ್ರಿ ಬಟ್ಟೆಯಿಲ್ಲದೇ ನೃತ್ಯ: ನಾನು ಇಲ್ಲಿ ಇರಲಾರೆ ಅಪ್ಪ'