ಇಂಫಾಲ (ಮಣಿಪುರ) : ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಭಾನುವಾರ (ಫೆ.9) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂಫಾಲ್ನ ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾದ ಬಿರೇನ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಮಣಿಪುರದ ಬಿಜೆಪಿ ಸರ್ಕಾರದ ಬಗ್ಗೆ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಪ್ರತಿಪಕ್ಷಗಳು ಚರ್ಚೆಯಲ್ಲಿ ತೊಡಗಿರುವ ಸಂದರ್ಭದಲ್ಲೇ, ಮಣಿಪುರ ವಿಧಾನಸಭೆಯ ನಿಗದಿತ ಅಧಿವೇಶನಕ್ಕೂ ಒಂದು ದಿನ ಮೊದಲು, ಬಿರೇನ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಸಿಂಗ್ ಅವರು, "ಇದುವರೆಗೆ ಮಣಿಪುರದ ಜನರಿಗೆ ಸೇವೆ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞತೆಗಳು. ಮಣಿಪುರದ ಪ್ರತಿಯೊಬ್ಬರ ಹಿತಾಸಕ್ತಿಗಳನ್ನು ಕಾಪಾಡಲು ವಿವಿಧ ಯೋಜನೆಗಳ ಅನುಷ್ಠಾನ, ಸಮಯೋಚಿತ ಕ್ರಮಗಳು, ಉತ್ತಮ ಮಧ್ಯಸ್ಥಿಕೆ, ಹಾಗೂ ಅಭಿವೃದ್ಧಿ ಕಾರ್ಯಗಳ ನೀಡಿದ ಕೇಂದ್ರ ಸರ್ಕಾರಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.
ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ ಎನ್ನುವುದು ನನ್ನ ಪ್ರಾಮಾಣಿಕ ವಿನಂತಿ. ಅವುಗಳಲ್ಲಿ, ಸಾವಿರಾರು ವರ್ಷಗಳಿಂದ ಶ್ರೀಮಂತ ಮತ್ತು ವೈವಿಧ್ಯಮಯ ನಾಗರಿಕತೆಯ ಇತಿಹಾಸವನ್ನು ಹೊಂದಿರುವ ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ಗಡಿ ನುಸುಳುವಿಕೆಯನ್ನು ಹತ್ತಿಕ್ಕುವುದು, ಮತ್ತು ಅಕ್ರಮ ವಲಸಿಗರ ಗಡೀಪಾರುಗಾಗಿ ನೀತಿ ರೂಪಿಸಿವುದು, ಮಾದಕ ದ್ರವ್ಯ ಮತ್ತು ಮತ್ತು ನಾರ್ಕೋ-ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರಿಸುವುದು, ಅನಧಿಕೃತ ಗಡಿ ದಾಟುವಿಕೆ ತಡೆಗೆ ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಕಟ್ಟುನಿಟ್ಟಾದ ಮತ್ತು ಪರಿಷ್ಕೃತ ಕಾರ್ಯವಿಧಾನವನ್ನು ಮುಂದುವರಿಸುವಂತೆ ಸಿಎಂ ಕೇಂದ್ರ ಸರ್ಕಾರಕ್ಕೆ ವಿನಂತಿಸಿದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದ ಬಿರೇನ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರನ್ನು ಭೇಟಿಯಾಗಿದರು. ದೆಹಲಿಯಿಂದ ಹಿಂದಿರುಗಿದ ಕೆಲವೇ ಗಂಟೆಗಳಲ್ಲಿ ಬಿರೇನ್ ಸಿಂಗ್ ರಾಜ್ಯ ಬಿಜೆಪಿ ಅಧ್ಯಕ್ಷೆ ಎ ಶಾರದಾ ಮತ್ತು ಬಿಜೆಪಿ ಮತ್ತು ಎನ್ಸಿಎಫ್ಗೆ ಸೇರಿದ 14 ಶಾಸಕರ ಜೊತೆಗೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
ಸೋಮವಾರದಿಂದ ಮಣಿಪುರದಲ್ಲಿ ವಿಧಾನಸಭೆಯ ಅಧಿವೇಶನ ಪ್ರಾರಂಭವಾಗಲಿದೆ. ಅದಕ್ಕೂ ಒಂದು ದಿನ ಮುಂಚೆ ಸಿಎಂ ರಾನೀನಾಮೆ ನೀಡಿದ್ದಾರೆ.
ಕೆಲವು ದಿನಗಳ ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ತಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿ ಬಿರೇನ್ ಸಿಂಗ್ ಹಾಗೂ ಆರು ಹಾಲಿ ಶಾಸಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದರು. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವ ಬಗ್ಗೆ ಮಾಹಿತಿ ಹಬ್ಬುತ್ತಿದ್ದಂತೆ, ಅಮಿತ್ ಶಾ ಸಭೆ ನಡೆಸಲು ಪ್ರಾರಂಭಿಸಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ ಕುಸಿದ ಕೇಜ್ರಿ'ವಾಲ್': ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತಿಶಿ