ಬೆಂಗಳೂರು: ಭಾರತದ ಏರೋಸ್ಪೇಸ್ ಹಾಗೂ ರಕ್ಷಣಾ ವಲಯ ಅಭೂತಪೂರ್ವ ವೇಗದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಸರ್ಕಾರದ ಬಲವಾದ ಕಾರ್ಯಯೋಜನೆಗಳು ಮತ್ತು ಸ್ವಾವಲಂಬನೆಗೆ ಹೆಚ್ಚು ಆದ್ಯತೆ ನೀಡಿರುವುದೇ ಕಾರಣ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ - 2025 ಪೂರ್ವಭಾವಿ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ರಕ್ಷಣಾ ಉತ್ಪಾದನೆಯಲ್ಲಿ ಭಾರತದ ತ್ವರಿತ ಪ್ರಗತಿಯ ಕುರಿತು ವಿವರಿಸಿದ ಸಚಿವರು, "ನಾವು ಇಡೀ ರಕ್ಷಣಾ ವಲಯವನ್ನು, ವಿಶೇಷವಾಗಿ ಏರೋಸ್ಪೇಸ್ ಉದ್ಯಮವನ್ನು ಹಿಂದೆಂದಿಗಿಂತಲೂ ಉತ್ತಮವಾಗಿಸಿದ್ದೇವೆ. ಇಂದು ನಾವು ಸ್ವದೇಶಿ ಪ್ರಮುಖ ರಕ್ಷಣಾ ಉಪಕರಣಗಳಗಳನ್ನ ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಮರ್ಥರಾಗಿದ್ದೇವೆ. ಜೊತೆಗೆ ವಿಶಾಲವಾದ ದೇಶೀಯ ಪೂರೈಕೆ ಸರಪಳಿಯನ್ನು ಸಹ ಯಶಸ್ವಿಯಾಗಿ ಸ್ಥಾಪಿಸಿದ್ದೇವೆ" ಎಂದು ಹೇಳಿದರು.
ಭಾರತದ ರಕ್ಷಣಾ ವ್ಯವಸ್ಥೆಯ ಆಧುನೀಕರಣದಲ್ಲಿ ಪ್ರಮುಖ ಮೈಲಿಗಲ್ಲು ಎಂದರೆ ದೇಶದೊಳಗೆ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ತಯಾರಿಸುವ ಸರ್ಕಾರದ ನಿರ್ಧಾರ. ಒಂದು ಕಾಲದಲ್ಲಿ ಊಹಿಸಲೂ ಅಸಾಧ್ಯವೆನಿಸಿದ್ದೆಲ್ಲ ಈಗ ನಿಜವಾಗುತ್ತಿದೆ ಎಂದು ರಾಜನಾಥ್ ಸಿಂಗ್ ಒತ್ತಿ ಹೇಳಿದರು.
"ಹಲವಾರು ಯಶಸ್ಸಿನ ಕಥೆಗಳು ಭಾರತವನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಲು ಕೊಡುಗೆ ನೀಡುತ್ತಿವೆ. ವಿಕಸನಗೊಳ್ಳುತ್ತಿರುವ ಚಲನಶೀಲತೆಯನ್ನು ಗಮನದಲ್ಲಿಟ್ಟುಕೊಂಡು, ಆರ್ಡನೆನ್ಸ್ ಫ್ಯಾಕ್ಟರಿ ಮಂಡಳಿಯನ್ನು ಕಾರ್ಪೊರೇಟೀಕರಣಗೊಳಿಸಲು ನಾವು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ಅವರು ತಿಳಿಸಿದರು.
ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಸಚಿವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು. "ಭಾರತವು ರಕ್ಷಣಾ ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವುದನ್ನು ಖಚಿತಪಡಿಸಿಕೊಳ್ಳಲು ನಾವು ಉದ್ಯಮದಲ್ಲಿ ಖಾಸಗಿ ಕಂಪನಿಗಳನ್ನು ಒಳಗೊಳ್ಳಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.
90ಕ್ಕೂ ಹೆಚ್ಚು ದೇಶಗಳ ಸುಮಾರು 150 ವಿದೇಶಿ ಪ್ರದರ್ಶಕರು ಸೇರಿದಂತೆ 900ಕ್ಕೂ ಹೆಚ್ಚು ಪ್ರದರ್ಶಕರ ಭಾಗವಹಿಸುವಿಕೆಯೊಂದಿಗೆ ಏರೋ ಇಂಡಿಯಾ 2025 ಈಗಾಗಲೇ ನಿರೀಕ್ಷೆಗಳನ್ನು ಮೀರಿದೆ. ಈ ಭವ್ಯ ಸಭೆಯು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಸಾಮರ್ಥ್ಯದಲ್ಲಿ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ" ಎಂದರು.
ಭಾರತವು ತನ್ನ ರಕ್ಷಣಾ ಮೂಲಸೌಕರ್ಯ ಮತ್ತು ಉತ್ಪಾದನಾ ಶಕ್ತಿಯನ್ನು ವಿಸ್ತರಿಸುವುದನ್ನು ಮುಂದುವರಿಸುತ್ತಿದ್ದಂತೆ, ಏರೋ ಇಂಡಿಯಾದಂತಹ ಕಾರ್ಯಕ್ರಮಗಳು ಸಹಯೋಗ, ನಾವೀನ್ಯತೆ ಮತ್ತು ಜಾಗತಿಕ ವೇದಿಕೆಯಲ್ಲಿ ರಾಷ್ಟ್ರದ ಪ್ರಗತಿಯನ್ನು ಪ್ರದರ್ಶಿಸಲು ನಿರ್ಣಾಯಕ ವೇದಿಕೆಯನ್ನು ಒದಗಿಸುತ್ತವೆ ಎಂದು ಅವರು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ವಿವರಿಸಿದರು.
ಇದನ್ನೂ ಓದಿ: ಏರೋ ಇಂಡಿಯಾ - 2025 ; ಈ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ವೀಕ್ಷಣೆಗೆ ತೆರಳುವವರಿಗೆ ಸೂಚನೆಗಳಿವು
ಇದನ್ನೂ ಓದಿ: ಏರೋ ಇಂಡಿಯಾ-2025 ನಾಳೆಯಿಂದ; ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ವೇದಿಕೆ ಸಜ್ಜು