ಬಹುತೇಕ ರಾಜ್ಯಗಳಲ್ಲಿ ಮಿತವ್ಯಯ ಸಂಘಗಳೆಂದು ಕರೆಯಲ್ಪಡುವ ಮಹಿಳಾ ಸ್ವಸಹಾಯ ಸಂಘಗಳು ಇರುವುದು ಗೊತ್ತೇ ಇದೆ. ಕನಿಷ್ಠ ಸಂಖ್ಯೆಯ ಮಹಿಳೆಯರೊಂದಿಗೆ ಗುಂಪನ್ನು ರಚಿಸುವ ಮೂಲಕ ಅವರಿಗೆ ಬ್ಯಾಂಕ್ ಗಳು ಸಾಲ ನೀಡುತ್ತವೆ. ಈ ಸಂಘಗಳ ಮೂಲಕ ಪಡೆದ ಸಾಲವನ್ನು ಕಡಿಮೆ ಬಡ್ಡಿಯೊಂದಿಗೆ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಕಷ್ಟಕಾಲದಲ್ಲಿರುವ ಬಡವರಿಗೆ ಈ ಸಾಲಗಳು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿವೆ. ಈ ಸ್ವಸಹಾಯ ಸಂಘಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿವೆ. ಮಹಿಳೆಯರು ಮಾತ್ರ ಸದಸ್ಯರಾಗಲು ಅರ್ಹರು. ಆದರೆ ಈಗ ಪುರುಷರಿಗೂ ಇದೇ ರೀತಿಯ ಸಂಘಗಳು ಬರುತ್ತಿವೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಆಂಧ್ರಪ್ರದೇಶದಲ್ಲಿ ಏಪ್ರಿಲ್ ನಿಂದ ಯೋಜನೆ ಜಾರಿ:ಮಹಿಳೆಯರಿಗೆ ಸ್ವಸಹಾಯ ಸಂಘಗಳು ಇರುವಂತೆ ಪುರುಷರಿಗಾಗಿ ಇಂತಹ ಸ್ವ-ಸಹಾಯ ಗುಂಪುಗಳನ್ನು ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ಬರಲ್ಲ, ಬದಲಾಗಿ ಪ್ರಯೋಗಿಕವಾಗಿ 2 ನಗರಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಮುಂಬರುವ ಏಪ್ರಿಲ್ ತಿಂಗಳಲ್ಲಿ ವಿಶಾಖಪಟ್ಟಣ ಮತ್ತು ವಿಜಯವಾಡದಲ್ಲಿ ಸುಮಾರು 3 ಸಾವಿರ ಸಂಘಗಳು ಪ್ರಾರಂಭವಾಗಲಿವೆ. ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಈಗಾಗಲೇ ಆರಂಭಗೊಂಡಿವೆ. ಕಳೆದ ಒಂದು ತಿಂಗಳಲ್ಲಿ 100 ಸಂಘಗಳನ್ನು ರಚಿಸಲಾಗಿದೆ. ಮುಂದಿನ ತಿಂಗಳು (ಮಾರ್ಚ್) ಅಂತ್ಯದ ವೇಳೆಗೆ ಉಳಿದ 2 ಸಾವಿರ ಸಂಘಗಳು ಸಿದ್ಧಗೊಳ್ಳಲಿವೆ.
ಕೇಂದ್ರ "NULM" ಭಾಗವಾಗಿ ಈ ಸಂಘಗಳ ರಚನೆ:ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (NULM) 2.0 ರ ಭಾಗವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ 25 ನಗರಗಳಲ್ಲಿ ಈ ಉಳಿತಾಯ ಸಂಘಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಅಸಂಘಟಿತ ವಲಯದ ಕಾರ್ಮಿಕರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಪಟ್ಟಣ ಮತ್ತು ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಸಂಘಗಳನ್ನು ರಚಿಸುವ ಮೂಲಕ, ಪುರುಷರಲ್ಲಿ ಉಳಿತಾಯದ ಅಭ್ಯಾಸ ಹೆಚ್ಚಿಸುವುದು ಸರ್ಕಾರದ ಆಶಯವಾಗಿದೆ. ಬ್ಯಾಂಕ್‌ಗಳಿಂದ ಸಾಲದ ಮೂಲಕ, ಉದ್ಯೋಗಾವಕಾಶಗಳು ಇನ್ನಷ್ಟು ಸುಧಾರಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.