ನವದೆಹಲಿ :ಇಲ್ಲಿನಕರ್ತವ್ಯ ಪಥದಲ್ಲಿ ನಡೆದ ಅದ್ದೂರಿ 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತ್ರಿವರ್ಣ ಧ್ವಜಾರೋಹಣ ಮಾಡಿದರು. ಈ ವೇಳೆ, ದ್ರೌಪದಿ ಮುರ್ಮು ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದರು.
ಧ್ವಜಾರೋಹಣ ನೆರವೇರಿದ ಬಳಿಕ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ದೇಶೀಯ ಬಂದೂಕುಗಳು ಮತ್ತು 105-ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳೊಂದಿಗೆ ರಾಷ್ಟ್ರಪತಿ ಅವರಿಗೆ 21 ಗನ್ ಸೆಲ್ಯೂಟ್ ಗಳನ್ನು ನೀಡುವ ಮೂಲಕ ಗೌರವ ಸೂಚಿಸಲಾಯಿತು. ಇನ್ನು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಗಮಿಸಿದ್ದು ವಿಶೇಷವಾಗಿತ್ತು. ನಂತರ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಈ ಬಾರಿ ಗಣರಾಜ್ಯೋತ್ಸವವು ಮುಖ್ಯವಾಗಿ ಮಹಿಳೆಯರ ಮೇಲೆ ಕೇಂದ್ರೀಕೃತವಾಗಿದೆ. 'ವಿಕ್ಷಿತ್ ಭಾರತ್' ಮತ್ತು 'ಭಾರತ: ಲೋಕತಂತ್ರ ಕಿ ಮಾತೃಕಾ' ಥೀಮ್‌ಗಳನ್ನು ಒಳಗೊಂಡಿದೆ. ಕರ್ತವ್ಯ ಪಥದಲ್ಲಿ ನಡೆದ ಪರೇಡ್ ಸುರಕ್ಷತೆ ಮತ್ತು ಭದ್ರತೆಗಾಗಿ ಸುಮಾರು 14,000 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.