Sunita Williams 9th Spacewalk: ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತೊಮ್ಮೆ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಇತ್ತೀಚೆಗೆ ಅಂದ್ರೆ ಜನವರಿ 16, 2025 ರಂದು ಅವರು ತಮ್ಮ ವೃತ್ತಿಜೀವನದ ಎಂಟನೇ ಬಾಹ್ಯಾಕಾಶ ನಡಿಗೆ ನಡೆಸಿದ್ದರು. ಈಗ ಅವರು ತಮ್ಮ ವೃತ್ತಿಜೀವನದ 9ನೇ ಬಾಹ್ಯಾಕಾಶ ನಡಿಗೆ ಅಥವಾ ಹೆಚ್ಚುವರಿ ವಾಹನ ಚಟುವಟಿಕೆ (EVA) ಮಾಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಐಎಸ್‌ಎಸ್‌ಗೆ ತೆರಳಿದ ನಂತರ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುತ್ತಿರುವುದು ಇದು ಎರಡನೇ ಬಾರಿ.
ಸುನೀತಾ ಅವರ ಇತ್ತೀಚಿನ 8ನೇ ಬಾಹ್ಯಾಕಾಶ ನಡಿಗೆಯ ಸಮಯದಲ್ಲಿ, ಅವರು ನಾಸಾ ಗಗನಯಾತ್ರಿ ನಿಕ್ ಹೇಗ್ ಅವರೊಂದಿಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲವು ರಿಪೇರಿಗಳನ್ನು ಮಾಡಿದ್ದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಸ್ತುತ ಕಮಾಂಡರ್ ಆಗಿರುವ ಸುನೀತಾ ವಿಲಿಯಮ್ಸ್, ತಮ್ಮ ಸಹ ಗಗನಯಾತ್ರಿ ಮತ್ತು ಫ್ಲೈಟ್ ಎಂಜಿನಿಯರ್ ಬ್ಯಾರಿ ವಿಲ್ಮೋರ್ ಅವರೊಂದಿಗೆ ಮತ್ತೊಮ್ಮೆ ISS ನಿಂದ ಹೊರಬಂದಿದ್ದಾರೆ. ಇದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೈಗೊಂಡ 92ನೇ ಬಾಹ್ಯಾಕಾಶ ನಡಿಗೆಯಾಗಿದೆ.
ನಾಸಾ ಸುನೀತಾ ವಿಲಿಯಮ್ಸ್ ಅವರ ಒಂಬತ್ತನೇ ಬಾಹ್ಯಾಕಾಶ ನಡಿಗೆಯನ್ನು ನೇರ ಪ್ರಸಾರ ಮಾಡಿದೆ. ನೀವು ಈ ನೇರ ಪ್ರಸಾರವನ್ನು ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿಯಲ್ಲಿ ಎಲ್ಲಿಂದಲಾದರೂ ವೀಕ್ಷಿಸಬಹುದಾಗಿದೆ. ಇಂದು (ಜ.30) ಸಂಜೆ ಸುನೀತಾ ಮತ್ತು ಬುಚ್ ವಿಲ್ಮೋರ್ ತಮ್ಮ ಸ್ಪೇಸ್‌ಸೂಟ್‌ಗಳನ್ನು ಬ್ಯಾಟರಿ ಪವರ್‌ಗೆ ಬದಲಾಯಿಸಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದಾರೆ. ನೀವು ಅವರ ನೇರಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಬಾಹ್ಯಾಕಾಶ ನಡಿಗೆಯ ಉದ್ದೇಶವೇನು? ಈ ಬಾಹ್ಯಾಕಾಶ ನಡಿಗೆಯ ಪ್ರಾಥಮಿಕ ಉದ್ದೇಶವೆಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರೇಡಿಯೋ ಫ್ರೀಕ್ವೆನ್ಸಿ ಗ್ರೂಪ್ ಆಂಟೆನಾ ಅಸೆಂಬ್ಲಿಯನ್ನು ತೆಗೆದುಹಾಕುವುದು. ಇದರೊಂದಿಗೆ, ಸುನೀತಾ ಮತ್ತು ವಿಲ್ಮೋರ್ ಅವರಿಗೆ ಆರ್ಬಿಟಲ್ ಔಟ್ಪೋಸ್ಟ್ನಲ್ಲಿ ಸೂಕ್ಷ್ಮಜೀವಿಗಳನ್ನು ಕಂಡುಹಿಡಿಯುವ ಕಾರ್ಯವನ್ನು ಸಹ ವಹಿಸಲಾಗಿದೆ.
ಜನವರಿ 16 ರಂದು ಸುನೀತಾ ತಮ್ಮ ವೃತ್ತಿಜೀವನದ ಎಂಟನೇ ಬಾಹ್ಯಾಕಾಶ ನಡಿಗೆಯನ್ನು ನಡೆಸಿದರು. ಆ ಬಾಹ್ಯಾಕಾಶ ನಡಿಗೆಯ ಸಮಯದಲ್ಲಿ ಅವರು ಮತ್ತು ಅವರ ಸಹ ಗಗನಯಾತ್ರಿ ನಿಕ್ ಹೇಗ್ ISS ನಲ್ಲಿ ಕೆಲವು ಪ್ರಮುಖ ಯಂತ್ರಾಂಶಗಳನ್ನು ಬದಲಾಯಿಸಿದರು. ಇದರೊಂದಿಗೆ ನ್ಯೂಟ್ರಾನ್ ಸ್ಟಾರ್ ಇಂಟೀರಿಯರ್ ಕಾಂಪೊಸಿಷನ್ ಎಕ್ಸ್‌ಪ್ಲೋರರ್ (NICER) ಎಕ್ಸ್-ರೇ ದೂರದರ್ಶಕವನ್ನು ಸಹ ದುರಸ್ತಿ ಮಾಡಿದರು.
ಸುನೀತಾ ಮತ್ತು ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ 6 ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ISS ಗೆ ತೆರಳಿದ್ದರು. ಅವರಿಬ್ಬರೂ ಸುಮಾರು ಒಂದು ವಾರದೊಳಗೆ, ಅದೇ ತಿಂಗಳ 14 ನೇ ತಾರೀಖಿನಂದು ಭೂಮಿಗೆ ಮರಳಲು ನಿರ್ಧರಿಸಲಾಗಿತ್ತು. ಆದರೆ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಿಂದಾಗಿ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದವು. ಪರಿಣಾಮವಾಗಿ ಇಬ್ಬರೂ ಕಳೆದ ಏಳು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ಸಹಾಯ ಕೇಳಿದ್ದಾರೆ ಎಂದು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. ಈ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓದಿ: ಬಾಹ್ಯಾಕಾಶದಲ್ಲಿ ಇಸ್ರೋ 'ಸೆಂಚುರಿ': ನ್ಯಾವಿಗೇಶನ್ ಉಪಗ್ರಹ ಉಡ್ಡಯನ ಯಶಸ್ವಿ, ಹೊಸ ಎತ್ತರಕ್ಕೇರಿದ ಭಾರತ