ಹುಬ್ಬಳ್ಳಿ: ಭಾರತೀಯ ರೈಲ್ವೆ ದೇಶದ ನಾಡಿಮಿಡಿತ. ದೇಶದ ಪ್ರಮುಖ ಸಾರಿಗೆ, ಸರಕು ಸಾಗಾಣಿಕೆ ರಾಜನಂತೆ ರೈಲ್ವೆ ಇಲಾಖೆ ಕಾರ್ಯನಿರ್ವಹಿಸುತ್ತದೆ. ಆದರೆ, ಇಂತ ರೈಲ್ವೆ ಇಲಾಖೆಗೆ ಅಪಘಾತ ಎಂಬುದು ಶಾಪವಾಗಿದೆ. ಅನಿರೀಕ್ಷಿತವಾಗಿ ನಡೆಯುವ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಇಲಾಖೆ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.
ಭಾರತೀಯ ರೈಲ್ವೆ ದೇಶಾದ್ಯಂತ ಇರುವ ರೈಲು ಮಾರ್ಗಗಳಲ್ಲಿ 'ಕವಚ' ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ. ಈ ತಂತ್ರಜ್ಞಾನದಿಂದ ನೈರುತ್ಯ ರೈಲ್ವೆಯ 3,692 ಕಿಮೀ, ವ್ಯಾಪ್ತಿಯಲ್ಲಿ ಎರಡು ಹಂತದಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡುವುದರ ಮೂಲಕ ಸಂಭವಿಸಬಹುದಾದ ಡಿಕ್ಕಿ ತಪ್ಪಿಸುವುದರ ಜೊತೆಗೆ ಅಪಘಾತ ಹಾನಿಯ ಪ್ರಮಾಣ ತಗ್ಗಿಸಲು ಮುಂದಾಗಿದೆ.
ನೈರುತ್ಯ ರೈಲ್ವೆ ವಲಯದ ಮಾರ್ಗಗಳಲ್ಲಿಯೂ ಎರಡು ಹಂತಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ನೈಋತ್ಯ ರೈಲ್ವೆಯ ಒಟ್ಟು 3,692 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ 1,585 ಕಿಮೀ ಹಾಗೂ ಎರಡನೇ ಹಂತದಲ್ಲಿ 1144.65 ಕೋಟಿ ರೂ. ವೆಚ್ಚದಲ್ಲಿ 2,200 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ಕವಚ ಅಳವಡಿಕೆಯಾಗಲಿದೆ. ಇದರೊಂದಿಗೆ ದೇಶದ ಎಲ್ಲ ಗೂಡ್ಸ್ ಹಾಗೂ ಪ್ರಯಾಣಿಕ ರೈಲುಗಳ 10 ಸಾವಿರ ಲೋಕೋ (ರೈಲು ಇಂಜಿನ್)ಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಪ್ರತಿ ನಿಲ್ದಾಣದಲ್ಲಿ 40 ಮೀಟರ್ ಎತ್ತರದ ಟವರ್: ರೈಲು ಹಳಿಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯ ಜತೆಗೆ ಪ್ರತಿ ನಿಲ್ದಾಣದಲ್ಲಿ 40 ಮೀಟರ್ ಎತ್ತರದ ಟವರ್ ಅಳವಡಿಕೆಗೆ ಮೊದಲ ಹಂತದ ಟೆಂಡರ್ ಕರೆಯಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯ ಕಾರ್ಯ ಪೂರ್ಣಗೊಳ್ಳಲಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಕವಚ ರೈಲ್ವೆ ಇಲಾಖೆಯ ಪ್ರಮುಖ ಯೋಜನೆಯಾಗಿದೆ. ರೈಲುಗಳ ನಡುವೆ ನಡೆಯುವ ಮುಖಾಮುಖಿ ಡಿಕ್ಕಿ ಹಾಗೂ ಹಿಂದಿನಿಂದ ಆಗುವ ಡಿಕ್ಕಿ ತಪ್ಪಿಸಲು (TCAS)ಕವಚ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. ಈ ಹಿಂದೆ, ಯೂರೋಪ್ನಲ್ಲಿ ಯಾವ ರೀತಿಯಲ್ಲಿ ಈ ಮಾದರಿ ಅಳವಡಿಕೆ ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಅಧ್ಯಯನ ಮಾಡಲಾಗಿದೆ." ಎಂದು ತಿಳಿಸಿದರು.
ಭಾರತೀಯ ತಂತ್ರಜ್ಞಾನವುಳ್ಳ ಕವಚ್ ಸನ್ನದ್ಧ: "ಕೊನೆಗೆ ಭಾರತೀಯ ತಂತ್ರಜ್ಞಾನವುಳ್ಳ ರೈಲು ರಕ್ಷ ಕವಚ ಅಭಿವೃದ್ಧಿಪಡಿಸಲಾಗಿದ್ದು, ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಹೊಸ ತಂತ್ರಜ್ಞಾನದ ಕವಚ 4.0 ಪರಿಚಯಿಸಲಾಗುತ್ತಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದ ವರ್ಷ ಪ್ರಾಯೋಗಿಕ ಪರೀಕ್ಷೆ ಮಾಡಿ ತೋರಿಸಿದ್ದಾರೆ. ಖುದ್ದು ಸಚಿವರು ಲೋಕೋದಲ್ಲಿ ನಿಂತುಕೊಂಡು ಪರಿಶೀಲಿಸಿದಾಗ, ಒಂದೇ ಹಳಿಯಲ್ಲಿ ಸಂಚರಿಸುವ ರೈಲು ನಿಂತಿರುವುದು ಸಾಬೀತಾಗಿದೆ. ಇದರಲ್ಲಿ ಯಶಸ್ಸು ಕಂಡಿದ್ದರಿಂದ ನೈರುತ್ಯ ರೈಲ್ವೆಯ ಮೊದಲ ಹಂತದಲ್ಲಿ 600 ಕೋಟಿ ವೆಚ್ಚದಲ್ಲಿ 1,585 ಕಿಮೀ ಟೆಂಡರ್ ಕರೆಯಲಾಗಿದೆ. ಉಳಿದಂತೆ ಎರಡನೇ ಹಂತದಲ್ಲಿ ಉಳಿದ 2,100ಕ್ಕೂ ಹೆಚ್ಚು ಕಿಮೀ 2,200 ಕೋಟಿ ರೂಪಾಯಿ ಟೆಂಡರ್ ಕರೆಯಲಾಗುತ್ತದೆ" ಎಂದರು.
ನೈರುತ್ಯ ರೈಲ್ವೆ ಮೂರು ವಿಭಾಗದಲ್ಲಿ ಕಾರ್ಯಾರಂಭ: ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಹುಬ್ಬಳ್ಳಿ ವಿಭಾಗದ ಬಳ್ಳಾರಿ-ಹುಬ್ಬಳ್ಳಿ, ಹುಬ್ಬಳ್ಳಿ - ಲೋಂಡಾ, ಲೋಂಡಾ - ಮೀರಜ್, ಹಾವೇರಿ - ಹುಬ್ಬಳ್ಳಿ ಸೇರಿದಂತೆ ಒಟ್ಟು 564 ಕಿ.ಮೀ. ಮಾರ್ಗದಲ್ಲಿ ಹಾಗೂ 60 ನಿಲ್ದಾಣಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯಾಗಲಿದೆ. ಬೆಂಗಳೂರು ವಿಭಾಗದ 789 ಕಿಮೀ.ಬೆಂಗಳೂರು - ಯಲಹಂಕ, ಬೆಂಗಳೂರು - ವೈಟ್ ಫೀಲ್ಡ್, ವೈಟ್ ಫೀಲ್ಡ್ - ಜೋಲಾರಪೇಟೆ, ಲೊಟ್ಟೆಗೊಲ್ಲಹಳ್ಳಿ-ಹೊಸೂರು, ಸಂಪಿಗೆ ರೋಡ್, ಯಶವಂತಪುರ-ಬಯಪ್ಪನಹಳ್ಳಿ-ಪೆನುಕೊಂಡ, ಹೊಸೂರು-ಧರ್ಮಪುರಿ, ಪೆನುಕೊಂಡ-ಧರ್ಮಾವರಂ, ಬೆಂಗಳೂರು-ಯಲಿಯೂರು ಮಾರ್ಗದ ಒಟ್ಟು 689 ಕಿ.ಮೀ.ಮಾಡಲಾಗುತ್ತದೆ. ಮೈಸೂರು ವಿಭಾಗದಲ್ಲಿ 332 ಕಿಮೀ ನಲ್ಲಿ ಅಳವಡಿಸಲಾಗುತ್ತದೆ. ಸಂಪಿಗೆರೋಡ್- ಅರಸಿಕೆರೆ. ಮೈಸೂರು- ಯಲಿಯೂರು, ಅರಸಿಕೆರೆ - ಹಾವೇರಿಯ ಹಾಗೂ 39 ನಿಲ್ದಾಣಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಸಲಾಗುತ್ತದೆ.
ಏನಿದು ತಂತ್ರಜ್ಞಾನ?:
- ರೈಲು ನಿಲ್ದಾಣ, ಲೋಕೋಗಳಲ್ಲಿ ಆರ್‌ಎಫ್‌ಐಡಿ ಅಳವಡಿಕೆ ಮಾಡಲಾಗುವುದು
- ಇದು ರೇಡಿಯೋ ಫ್ರೀಕ್ವೆನ್ಸಿ ಐಡಿಯಾಗಿದ್ದು, ರೈಲು ನಿಲ್ದಾಣ, ರೈಲು ಟ್ರ್ಯಾಕ್, ಲೋಕೋದಲ್ಲಿ ಅಳವಡಿಕೆ ಮಾಡಲಾಗುತ್ತದೆ.
- ರೈಲುಮಾರ್ಗದ ಪ್ರತಿ ಕಿ.ಮೀ.ನ ಆರಂಭದಲ್ಲಿ ಎರಡು ರೇಡಿಯೋ ಫ್ರೀಕ್ವೆನ್ಸಿ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಒಂದು ವೇಳೆ ಒಂದು ಆರ್‌ಎಫ್‌ಐಡಿ ವಿಫಲವಾದರೂ ಮತ್ತೊಂದು ಕೆಲಸ ಮಾಡುತ್ತದೆ. ಎರಡೂ ಆರ್‌ಎಫ್‌ಐಡಿ ವಿಫಲವಾದರೆ ರೈಲು ಮುಂದೆ ಸಂಚರಿಸುವುದಿಲ್ಲ.
- ಹಳಿಯಲ್ಲಿರುವ ಆರ್‌ಎಫ್‌ಐಡಿ ತರಂಗಗಳು ಆ ಮಾರ್ಗದಲ್ಲಿ ಸಂಚರಿಸುವ ರೈಲ್ವೆ ಇಂಜಿನ್ ಹಾಗೂ ಸಮೀಪದ ನಿಲ್ದಾಣಗಳಿಗೆ ಹೋಗುತ್ತಿರುತ್ತವೆ.
- ಒಂದು ವೇಳೆ ಅದೇ ಹಳಿಯಲ್ಲಿ ಮತ್ತೊಂದು ರೈಲು ಎದುರಿನಿಂದ ಬರುತ್ತಿದ್ದರೆ ಅಥವಾ ನಿಂತಿದ್ದರೆ ತರಂಗಗಳನ್ನು ಆಧರಿಸಿ ಲೋಕೋಪೈಲಟ್ ರೈಲು ನಿಲುಗಡೆಗೊಳಿಸುತ್ತಾನೆ. ಲೋಕೋಪೈಲಟ್ ರೈಲು ನಿಲುಗಡೆಗೊಳಿಸದಿದ್ದರೂ ಸಹ ರೈಲು ತನ್ನಿಂದ ತಾನೇ ವೇಗ ಕಡಿಮೆ ಮಾಡಿಕೊಂಡು ನಿಲ್ಲುತ್ತದೆ.
- ಮಾರ್ಗದಲ್ಲಿ ದಟ್ಟ ಇಬ್ಬನಿ ಇದ್ದು, ದಾರಿ ಕಾಣದೇ ಇದ್ದರೂ ಸಹ ರೈಲು ಇಂಜಿನ್‌ನಲ್ಲಿ ಬರುವ ಆರ್‌ಎಫ್‌ಐಡಿ ತರಂಗಗಳನ್ನು ಆಧರಿಸಿ ಲೋಕೋಪೈಲಟ್ ರೈಲು ಸಂಚಾರ ಮುಂದುವರಿಸುತ್ತಾನೆ.
- ರೈಲು ಹಳಿಗಳ ಪಕ್ಕದಲ್ಲಿ ಅಳವಡಿಸುವ ಕವಚ್ ತಂತ್ರಜ್ಞಾನದಿಂದ ರೈಲುಗಳ ಮಧ್ಯೆ ಸಂಭವಿಸುವ ಡಿಕ್ಕಿ ತಪ್ಪಲಿದೆ. ಇದರಿಂದ ಸಾಕಷ್ಟು ಜೀವಹಾನಿ ತಪ್ಪಲಿದೆ.
- ರೈಲುಗಳು ಒಂದೇ ಮಾರ್ಗದಲ್ಲಿ ಮುಖಾಮುಖಿಯಾಗಿ ಅಥವಾ ಒಂದೇ ಹಳಿಯಲ್ಲಿ ನಿಂತಿದ್ದ ರೈಲಿಗೆ ಹಿಂದಿನಿಂದ ಬಂದ ಮತ್ತೊಂದು ರೈಲು ಡಿಕ್ಕಿ ಹೊಡೆಯುವುದನ್ನು ತಡೆಹಿಡಿಯಲಿದೆ.
"ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸಲು ಭಾರತೀಯ ರೈಲ್ವೆ ಮಂಡಳಿ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಕವಚ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. 2026 ರ ಒಳಗೆ ನೈಋತ್ಯ ರೈಲ್ವೆ ವಲಯದಲ್ಲಿ ಎರಡು ಹಂತಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಲಿದೆ" ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.