ನವದೆಹಲಿ:ಕರ್ನಾಟಕ ನಾಲ್ಕು ಸೇರಿದಂತೆ 15 ರಾಜ್ಯಗಳಲ್ಲಿ ತೆರವಾಗುವ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸೋಮವಾರ ದಿನಾಂಕ ಪ್ರಕಟಿಸಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕೂಡ ಮುಗಿಯಲಿದೆ.
ಆಯೋಗದ ಪ್ರಕಟಣೆಯ ಪ್ರಕಾರ, ಫೆಬ್ರವರಿ 8 ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ರಾಜ್ಯಸಭೆಗಳಿಗೆ ನಾಮನಿರ್ದೇಶನ ಮಾಡಲು ಫೆಬ್ರವರಿ 15 ಕೊನೆಯ ದಿನಾಂಕವಾಗಿರಲಿದೆ. ಮರುದಿನ (ಫೆಬ್ರವರಿ 16) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಫೆಬ್ರವರಿ 20 ಕೊನೆಯ ದಿನಾಂಕ. ಫೆಬ್ರವರಿ 27 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ನಡುವೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಕೂಡ ನಡೆಯಲಿದೆ ಎಂದು ತಿಳಿಸಿದೆ.
ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ?:ಈಗ ಚುನಾವಣೆ ನಡೆಸಲು ಉದ್ದೇಶಿರುವ ಸ್ಥಾನಗಳ ಅವಧಿಯು ಏಪ್ರಿಲ್ 2 ರಂದು ಮುಗಿಯಲಿದೆ. ಸಂಸದರ ಸ್ಥಾನ ತೆರವಾಗುವ ನಿಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 10 ರಾಜ್ಯಸಭಾ ಸದಸ್ಯರು ಅವಧಿ ಮುಗಿಸಲಿದ್ದಾರೆ. ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ 6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ತಲಾ 5, ಕರ್ನಾಟಕ ಮತ್ತು ಗುಜರಾತ್‌ನಿಂದ ತಲಾ 4, ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ತಲಾ ಮೂರು, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶದಿಂದ ತಲಾ ಒಬ್ಬರು ಅವಧಿ ಪೂರ್ಣ ಮಾಡಲಿದ್ದಾರೆ.