ಬೆಳಗಾವಿ: ಬೆಳಗಾವಿ ಕೆಡಿಪಿ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರತಿಧ್ವನಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು. ಸಾಲದ ವಿಚಾರದಲ್ಲಿ ಜನರು ಜಾಗೃತರಾಗುವಂತೆ ಸಚಿವರು ಕರೆ ನೀಡಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ 2024-25ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಆಕ್ರೋಶ: ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಖಾಸಗಿ ಫೈನಾನ್ಸ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ತಾರಿಹಾಳ ಗ್ರಾಮದಲ್ಲಿ ಮಾನವೀಯತೆ ನೋಡದೆ ಬಾಣಂತಿಯನ್ನು ಮನೆಯಿಂದ ಹೊರಹಾಕಲಾಗಿದೆ. ಬೆಳಗಾವಿ ಅಷ್ಟೇ ಅಲ್ಲದೆ ರಾಜ್ಯದಲ್ಲಿ ಈ ರೀತಿ ಪ್ರಕರಣಗಳು ಹೆಚ್ಚುತ್ತಿವೆ. ಮೀಟರ್ ಬಡ್ಡಿ ದಂಧೆಯವರ ಮೇಲೆ ಕ್ರಮ ಕೈಗೊಳ್ಳಬೇಕು. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಪ್ರಕರಣ ಸಂಬಂಧ ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೂ ಮಾತಾಡಿದ್ದೇನೆ. ರಾಜ್ಯ ಸರ್ಕಾರಕ್ಕೆ ದೂರು ಕೊಟ್ಟಿದ್ದೇನೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಇಂಥವರ ಲೈಸನ್ಸ್ ರದ್ದು ಪಡಿಸಬೇಕು" ಎಂದು ಒತ್ತಾಯಿಸಿದರು.
ವಿವರ ನೀಡಿದ ಎಸ್ಪಿ ಗುಳೇದ: ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದರು. "ಸಾಲ ವಾಪಸ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಶಿರೂರಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಬ್ಸಿಡಿ ಹೆಸರಿನಲ್ಲಿ ವಂಚನೆ ಸೇರಿ ಬೇರೆ ಬೇರೆ ಪ್ರಕರಣಗಳು ಆಗುತ್ತಿವೆ. ಫೈನಾನ್ಸ್ ಕಿರುಕುಳ ಸಂಬಂಧ ಈಗಾಗಲೇ ಡಿಸಿ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಜಿಲ್ಲೆಯಲ್ಲಿ ಎರಡು ರೀತಿ ಸಮಸ್ಯೆ ಆಗುತ್ತಿವೆ. ಸಾಲ ಮರುಪಾವತಿ ಮಾಡದಿರುವುದು ಮತ್ತು ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಫೈನಾನ್ಸ್ ಕಿರುಕುಳ ಸಂಬಂಧ ಲೀಡ್ ಬ್ಯಾಂಕ್ ಮ್ಯಾನೇಜರ್ ಜೊತೆಗೂ ಮಾತನಾಡಿದ್ದು, ಬರುವ 28 ಮತ್ತು 29ರಂದು ಸಭೆ ಮಾಡುತ್ತೇವೆ" ಎಂದರು. ಇದೇ ವೇಳೆ ಮಾತನಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ,"ಸಮಸ್ಯೆ ಕುರಿತು ಜನರಲ್ಲಿ ಜಾಗೃತಿ ಅಭಿಯಾನ ನಡೆಸುತ್ತೇವೆ" ಎಂದರು.
ಮೂರು ತಿಂಗಳ ಕಾಲಾವಕಾಶ ಕೋಡಿ ಎಂದಿದ್ದೇವೆ: "ಮೂರು ತಿಂಗಳ ಕಾಲ ಸಮಯಾವಕಾಶ ಕೊಡಿ ಎಂದು ಮೈಕ್ರೋ ಫೈನಾನ್ಸ್ಗೆ ಹೇಳಿದ್ದೇವೆ. ಅವರು ಕೂಡ ಒಪ್ಪಿದ್ದಾರೆ. ಆದರೆ, ಮಧ್ಯವರ್ತಿಗಳು ಒತ್ತಡ ಶುರು ಮಾಡಿದ್ದಾರೆ. ತಾವು ಜಾರಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಸಾಲ ಪಡೆದು ಆಮಿಷಕ್ಕೆ ಒಳಗಾಗಿ ಮೋಸ ಹೋಗಿದ್ದೇವೆ ಎಂದು ಮಹಿಳೆಯರೇ ಒಪ್ಪಿದ್ದಾರೆ. ಎಂಎಫ್ಐ ಮೂಮೆಂಟ್ ಹಾಳಾಗುತ್ತದೆ. ಅದು ಆಗದಂತೆ ಎಚ್ಚರಿಕೆಯಿಂದ ಕ್ರಮ ವಹಿಸಬೇಕಿದೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
"ಜಿಲ್ಲೆಯಲ್ಲಿ 2245 ರಿಜಿಸ್ಟರ್ ಹಣಕಾಸು ಸಂಸ್ಥೆಗಳಿಗೆ ಸೆಕ್ಯುರ್ಡ್ ಶೇ.14, ಅನ್ಸೆಕ್ಯುರ್ಡ್ ಶೇ.16 ಬಡ್ಡಿ ದರ ಇದೆ. ಇದಕ್ಕಿಂತ ಹೆಚ್ಚು ಬಡ್ಡಿ ಕೇಳಿದರೆ ದೂರು ಸಲ್ಲಿಸಬಹುದು" ಎಂದು ಸಹಕಾರ ಇಲಾಖೆ ನಿಬಂಧಕರು ಸಭೆಯಲ್ಲಿ ತಿಳಿಸಿದರು.
ಸಾಲ ಕೊಡುವಾಗ ಸಬ್ಸಿಡಿ ಏನೂ ಇರಲ್ಲ- ಹುಷಾರ್ ಆಗಿರಿ: ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, "ಸಾಲ ಕೊಡುವಾಗ ಸಬ್ಸಿಡಿ ಏನೂ ಇರಲ್ಲ. ನೀವೇ ತುಂಬಬೇಕು ಅಂತ ಜಾಗೃತಿ ಮಾಡಿ. ಈಗ ಯಾವ ರೀತಿ ಸಮಸ್ಯೆ ಬಗೆಹರಿಸುತ್ತೀರಿ ಎಂಬ ಬಗ್ಗೆ ಸಭೆ ಮಾಡಿ ಕ್ರಮ ವಹಿಸಿ" ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಚರ್ಚೆಗೆ ಬಂದ ಹಿಡಿಕಲ್ ಜಲಾಶಯ ವಿಚಾರ: ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ನೀಡುವ ಕುರಿತು ಶಾಸಕ ಆಸೀಫ್ ಸೇಠ್ ಸಭೆಯಲ್ಲಿ ಪ್ರಸ್ತಾಪಿಸಿದರು. "ಇದುವರೆಗೆ ಅನುಮತಿ ನೀಡಿರದಿದ್ದರೆ ತಕ್ಷಣವೇ ಕಾಮಗಾರಿಯನ್ನು ತಡೆಹಿಡಿಯಬೇಕು" ಎಂದರು. ಇದೇ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, "ಜಿಲ್ಲೆಯ ಜಲಾಶಯಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟಿರುವ ನೀರಿನ ಪ್ರಮಾಣದ ಬಗ್ಗೆ ಸಮಗ್ರ ಮಾಹಿತಿ ಹಾಗೂ ಸರಕಾರದ ಆದೇಶವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು" ಎಂದರು.
"ಹಿಡಕಲ್ ಜಲಾಶಯದಿಂದ 0.58 ಟಿಎಂಸಿ ನೀರನ್ನು ಕಿತ್ತೂರು ಹಾಗೂ ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ಹಂಚಿಕೆ ನಿಯಮಾನುಸಾರ ಮಾಡಲಾಗಿರುತ್ತದೆ. ಜಲಾಶಯದ ಹಿನ್ನೀರಿನಿಂದ ನೀರು ಪಡೆಯುತ್ತಿಲ್ಲ. ಇದರ ಬದಲಾಗಿ ಜಲಾಶಯದಿಂದ ಬಿಡುಗಡೆ ಮಾಡಲಾದ ನೀರನ್ನು ಮಾತ್ರ ಪಡೆಯಲು ಅವಕಾಶವಿರುತ್ತದೆ" ಎಂದು ತಿಳಿಸಿದರು.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟಿಸಿ: "ಬೆಳಗಾವಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಬೇಕು. ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಗೆ ಬರುವ ಜಿಲ್ಲಾ ಆಸ್ಪತ್ರೆಗಳ ಆಡಳಿತದಲ್ಲಿ ಜಿಲ್ಲಾಡಳಿತಕ್ಕೆ ಪ್ರಮುಖ ಜವಾಬ್ದಾರಿ ನೀಡಲು ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ತಜ್ಞ ವೈದ್ಯರನ್ನು ಕರೆತಂದು ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗಬೇಕಾದರೆ ಸರಕಾರಿ ಕ್ಯಾನ್ಸರ್ ಆಸ್ಪತ್ರೆಯನ್ನು ಬೆಳಗಾವಿ ನಗರದಲ್ಲಿಯೇ ಸ್ಥಾಪಿಸಬೇಕು. ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಾಲಮಿತಿಯಲ್ಲಿ ಒದಗಿಸಬೇಕು. ಇನ್ನು ಉದ್ಯೋಗ ಸೃಷ್ಟಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ಒದಗಿಸಬೇಕು" ಎಂದು ನಾಗರಾಜ್ ಯಾದವ್ ಸಲಹೆ ನೀಡಿದರು.
ಬೆಳಗಾವಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿ ತಡವಾಗುತ್ತಿದೆ. ಆದ್ದರಿಂದ ಮೊದಲು ಹಂತ ಹಂತವಾಗಿ ಆರೋಗ್ಯ ಸೇವೆ ಆರಂಭಿಸಬೇಕು. ನಂತರದ ದಿನಗಳಲ್ಲಿ ಆಸ್ಪತ್ರೆ ಉದ್ಘಾಟನೆಗೆ ಕ್ರಮ ವಹಿಸುವಂತೆ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, "ಬೆಳಗಾವಿಯಲ್ಲಿ ಆಟೋಮೊಬೈಲ್ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶವಿರುವುದರಿಂದ ಇದಕ್ಕಾಗಿ ಜಮೀನು ಗುರುತಿಸಿ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಬೇಕಿದೆ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಏರೋಸ್ಪೇಸ್, ಆಟೋಮೊಬೈಲ್ ಸೇರಿದಂತೆ ಹನ್ನೊಂದು ಬಗೆಯ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಕ್ರಮಗಳನ್ನು ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾಗುತ್ತಿದೆ" ಎಂದರು.
ಸಭೆಯಲ್ಲಿ ಶಾಸಕರಾದ ರಾಜು ಕಾಗೆ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಧಾನಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸಾಬಣ್ಣ ತಳವಾರ, ಜಿಪಂ ಸಿಇಒ ರಾಹುಲ್ ಶಿಂಧೆ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ: ಜ.25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ