ಎರ್ನಾಕುಲಂ (ಕೇರಳ) : ಬಂದರು ನಗರವಾದ ಕೊಚ್ಚಿಯ ವಿವಿಧ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಕಲಮಸ್ಸೆರಿ ಪ್ರದೇಶದಲ್ಲಿ ನೂರಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಭಾರಿ ಮಳೆಗೆ ಮೇಘಸ್ಪೋಟ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಮುಂಜಾನೆಯಿಂದಲೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಚ್ಚಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಹಲವು ಕಿರಿದಾದ ಮಾರ್ಗಗಳು ಮತ್ತು ಜನನಿಬಿಡ ರಸ್ತೆಗಳು ಮುಳುಗಡೆಯಾಗಿವೆ. ಬಂದರು ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಮಳೆಯ ನಂತರ ಹೆದ್ದಾರಿಗಳಲ್ಲಿ ವಾಹನಗಳು ಬಸವನ ಹುಳುವಿನ ರೀತಿಯಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ.
ಕಾಕ್ಕನಾಡು - ಇನ್ಫೋಪಾರ್ಕ್ ಮತ್ತು ಆಲುವಾ -ಎಡಪ್ಪಳ್ಳಿ ಪ್ರದೇಶಗಳು ಜಲಾವೃತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೊಚ್ಚಿಯ ತೊಪ್ಪುಂಪಾಡಿ ಎಂಬಲ್ಲಿ ರಾಜ್ಯ ಕೆಎಸ್‌ಆರ್‌ಟಿಸಿ ಬಸ್‌ನ ಮೇಲೆ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲೇಖಕಿಯ ಮನೆಗೆ ನೀರು ನುಗ್ಗಿದೆ : ಕೇರಳದ ಬಂದರು ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಇಲ್ಲಿನ ಕಲಮಸ್ಸೆರಿಯಲ್ಲಿರುವ ಖ್ಯಾತ ಮಲಯಾಳಂ ಲೇಖಕಿ ಹಾಗೂ ಸಾಹಿತ್ಯ ವಿಮರ್ಶಕಿ ಎಂ. ಲೀಲಾವತಿ ಅವರ ಮನೆಗೆ ಹಾನಿಯಾಗಿದೆ. ಸತತ ಮಳೆಯಿಂದಾಗಿ ಕಟ್ಟಡಕ್ಕೆ ನೀರು ನುಗ್ಗಿದ್ದರಿಂದ ಎರಡಂತಸ್ತಿನ ಮನೆಯಲ್ಲಿದ್ದ ನೂರಾರು ಪುಸ್ತಕಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಅಡುಗೆ ಸಾಮಗ್ರಿಗಳು ನಾಶವಾಗಿವೆ.
ಮನೆಯ ವಿವಿಧ ಕೊಠಡಿಗಳಲ್ಲಿ ಕಪಾಟು, ರ್ಯಾಕ್ಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ಪುಸ್ತಕಗಳು, ನಿಯತಕಾಲಿಕೆಗಳು ನೀರಿನಲ್ಲಿ ತೇಲುತ್ತಿದ್ದವು. ಕೆಳ ಮಹಡಿಯಲ್ಲಿ ಮೊಣಕಾಲಿನವರೆಗೂ ನೀರು ನಿಂತಿದ್ದು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿವೆ. ಈ ವರ್ಷ 96 ವರ್ಷದ ಶಿಕ್ಷಣತಜ್ಞರಿಗೆ ಪ್ರಸ್ತುತಪಡಿಸಿದ ಹಲವಾರು ಶೀಲ್ಡ್ಸ್ಗಳು ಪ್ರವಾಹದ ನೀರಿನಲ್ಲಿ ತೇಲುತ್ತಿರುವ ದೃಶ್ಯವು ಅವರ ಅಭಿಮಾನಿಗಳಿಗೆ ಆಘಾತ ನೀಡಿತು. ಮಳೆಯ ತೀವ್ರತೆ ಮತ್ತು ಪ್ರವಾಹದ ನೀರು ಮನೆಗೆ ನುಗ್ಗಲು ಪ್ರಾರಂಭಿಸಿದ್ದರಿಂದ ಲೀಲಾವತಿ ಅವರು ತಮ್ಮ ಮಗನ ಮನೆಗೆ ತೆರಳಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತ : ಮಂಗಳವಾರ ಕೇರಳದ ಹಲವೆಡೆ ಬಿರುಗಾಳಿ ಸಹಿತ ಎಡೆಬಿಡದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ ಮತ್ತು ಎರ್ನಾಕುಲಂನಂತಹ ದಕ್ಷಿಣ ಮತ್ತು ಮಧ್ಯ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿದಿದೆ. ಇದರಿಂದಾಗಿ ಮನೆಗಳು ಹಾನಿಗೊಳಗಾಗಿದ್ದು, ಮರಗಳು ನೆಲಸಮಗೊಂಡಿವೆ. ಅಲ್ಲದೇ, ಸಣ್ಣ ಜಲಮೂಲಗಳು ಪಟ್ಟಣಗಳು ಮತ್ತು ಹಳ್ಳಿಗಳಾದ್ಯಂತ ಉಕ್ಕಿ ಹರಿದಿವೆ.
ಮಳೆಯ ತೀವ್ರತೆಯಿಂದಾಗಿ, ಭಾರತೀಯ ಹವಾಮಾನ ಇಲಾಖೆ (IMD) ಇಂದು ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ, ಅಲಪ್ಪುಳ ಮತ್ತು ಇಡುಕ್ಕಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇತ್ತೀಚಿನ IMD ಅಪ್‌ಡೇಟ್ ಪ್ರಕಾರ ತಿರುವನಂತಪುರಂ, ಕೊಲ್ಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಅನ್ನು ಎಲ್ಲೋ ಅಲರ್ಟ್‌ನಲ್ಲಿ ಇರಿಸಲಾಗಿದೆ.
ಭಾರಿ ಮಳೆಯ ಹಿನ್ನೆಲೆ ಇಡುಕ್ಕಿ ಜಿಲ್ಲೆಯ ಮಲಂಕರ ಅಣೆಕಟ್ಟಿನ ನಾಲ್ಕು ಶೆಟರ್‌ಗಳನ್ನು ಎತ್ತಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾ ಮತ್ತು ವಾಗಮೋನ್ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಉನ್ನತ ವ್ಯಾಪ್ತಿಯ ನೆಡುಮಂಗಡ, ನೆಯ್ಯಟ್ಟಿಂಕರ, ಕಟ್ಟಕ್ಕಡ, ಅಂಬೂರಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ.
ಸ್ಥಳೀಯರ ಪ್ರಕಾರ, ಸಮೀಪದ ವರ್ಕಳದ ಪಾಪನಾಸಂನಲ್ಲಿರುವ ಪ್ರಸಿದ್ಧ ಬಲಿ ಮಂಟಪದ ಹಿಂಭಾಗದ ಬೆಟ್ಟದ ಒಂದು ಭಾಗವು ಭಾರಿ ಮಳೆಯಿಂದಾಗಿ ಕುಸಿದಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆ ಗಿರಿಧಾಮ ಪೊನ್ಮುಡಿಯಲ್ಲಿರುವ ಪರಿಸರ ಪ್ರವಾಸೋದ್ಯಮ ಕೇಂದ್ರವನ್ನು ಮುಚ್ಚಲಾಗಿದೆ ಎಂಬುದು ತಿಳಿದು ಬಂದಿದೆ.
ಸಮುದ್ರ ತೀರದ ಪ್ರದೇಶಗಳಲ್ಲಿ ಹೆಚ್ಚಿನ ಅಲೆಗಳು ಮತ್ತು ಪ್ರಕ್ಷುಬ್ಧ ವಾತಾವರಣ ಕಂಡುಬಂದಿದ್ದು, ಮೀನುಗಾರಿಕಾ ಹಡಗುಗಳಿಗೆ ಅಪಾಯವನ್ನು ಉಂಟುಮಾಡಿದೆ. ಇಲ್ಲಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಮುತಲಪೋಳಿ ಮೀನುಗಾರಿಕಾ ಕುಗ್ರಾಮದ ಕರಾವಳಿಯಲ್ಲಿ ದೋಣಿ ಮಗುಚಿರುವ ಎರಡು ಘಟನೆಗಳು ವರದಿಯಾಗಿದೆ. ಒಂದು ಘಟನೆಯಲ್ಲಿ ಇಂದು ಬೆಳಗ್ಗೆ ಹೆಚ್ಚಿನ ಅಲೆಗಳ ಕಾರಣ ದೋಣಿ ಮಗುಚಿದೆ. ಇದರಿಂದಾಗಿ ಮೀನುಗಾರ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ಬಿದ್ದ ಇತರ ಮೂವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಕಂದಾಯ ಸಚಿವ ಕೆ. ರಾಜನ್ ಮಾತನಾಡಿ, ಮಧ್ಯ ಕೇರಳ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ ಮತ್ತು ಎರ್ನಾಕುಲಂ ಜಿಲ್ಲೆಯ ಪಲ್ಲುರುತಿ ಪ್ರದೇಶದಲ್ಲಿ ಒಂದೂವರೆ ಗಂಟೆಗಳಲ್ಲಿ 95 ಮಿಮೀ ಮಳೆಯಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದೆ. ಒಂದೂವರೆ ಗಂಟೆಯಲ್ಲಿ ಕಲಮಶ್ಶೇರಿಯಲ್ಲಿ 57 ಮಿ.ಮೀ ಮಳೆಯಾಗಿದೆ ಎಂದು ಅವರು ತಿಳಿಸಿದರು. ಮಳೆಯಿಂದ ಉಂಟಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ರಾಜ್ಯದಲ್ಲಿ 3,597 ಪರಿಹಾರ ಶಿಬಿರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ತುರ್ತು ಸಂದರ್ಭಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವ ಶಿಬಿರಗಳನ್ನು ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ. ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಭಾರಿ ಮಳೆಯನ್ನು ಸೂಚಿಸುತ್ತದೆ. ಆದರೆ, ಆರೆಂಜ್ ಅಲರ್ಟ್ ಎಂದರೆ 11 ಸೆಂ.ಮೀ ನಿಂದ 20 ಸೆಂ.ಮೀ ವರೆಗಿನ ಅತಿ ಭಾರಿ ಮಳೆ ಮತ್ತು ಎಲ್ಲೋ ಅಲರ್ಟ್ ಎಂದರೆ 6 ಸೆಂ.ಮೀ ಮತ್ತು 11 ಸೆಂ.ಮೀ ಮಳೆಯನ್ನು ಸೂಚಿಸುತ್ತದೆ.
ಇದನ್ನೂ ಓದಿ :ಕೇರಳದಲ್ಲಿ ಪೂರ್ವ ಮುಂಗಾರು ಅಬ್ಬರ: ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್.. ಮುಂದಿನ 5 ದಿನ ಕರ್ನಾಟಕದಲ್ಲೂ ಮಳೆ!! - Heavy Rainfall In Kerala