ನವದೆಹಲಿ: ಚಳಿಗಾಲದಲ್ಲಿ ದಟ್ಟ ಮಂಜಿನಿಂದಾಗಿ ರೈಲುಗಳ ಪ್ರಯಾಣದಲ್ಲಿ ಭಾರಿ ವ್ಯತ್ಯಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಮುನ್ನೆಚ್ಚರಿಕೆಯೊಂದಿಗೆ ಸುರಕ್ಷತಾ ಕ್ರಮವನ್ನು ರೈಲ್ವೆ ಇಲಾಖೆ ಅಳವಡಿಸಿಕೊಂಡಿದೆ. ಕಳಪೆ ಗೋಚರತೆ ನಿವಾರಣೆ ಮತ್ತು ನಿಲ್ದಾಣಗಳ ಬಗ್ಗೆ ಮಾಹಿತಿ ಒದಗಿಸಲು ವಿಸಿಬಿಲಿಟಿ ಟೆಸ್ಟ್ ಆಬ್ಜೆಕ್ಟ್ (ವಿಟಿಒ) ಬಳಸಲು ಸ್ಟೇಷನ್ ಮಾಸ್ಟರ್‌ಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಕ್ರಮ ಕೈಗೊಂಡಿರುವ ಸುರಕ್ಷಿತಾ ಕ್ರಮದ ಕುರಿತು ಮಾತನಾಡಿರುವ ವಾಯುವ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಯಾ ಶಶಿ ಕಿರಣ್, ಕಳಪೆ ಗೋಚರತೆಯ ಸಂದರ್ಭದಲ್ಲಿ ರೈಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲುಗಳ ವೇಗವನ್ನು ಗಂಟೆಗೆ 60 ರಿಂದ 75 ಕಿಲೋಮೀಟರ್‌ಗಳ ನಡುವೆ ನಿರ್ವಹಿಸುಂತೆ ಲೋಕೋ ಪೈಲಟ್‌ಗಳಿಗೆ ಸೂಚನೆ ನೀಡಲಾಗಿದೆ. ಲೋಕೋ ಪೈಲೆಟ್ಗಳಿಗೆ ಸಿಗ್ನಲ್ ಮಾಹಿತಿ ಫಲಕಗಳನ್ನು ಕಾಣುವಂತೆ ಮಾಡಲು ದುರಸ್ತಿಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಇವು ಪ್ರಕಾಶಮಾನವಾಗಿ ಕಾಣುವಂತಹ ಪಟ್ಟಿಗಳನ್ನು ಅಳವಡಿಸಲಾಗುತ್ತಿದೆ.
ಪ್ರತಿ ವರ್ಷ ಮಂಜಿನಿಂದಾಗಿ ರೈಲುಗಳ ಕಾರ್ಯಾಚರಣೆ ನಿಗದಿತ ಸಮಯಕ್ಕಿಂತ ಅನೇಕ ಗಂಟೆಗಳ ಕಾಲ ವಿಳಂಬವಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಸಮಸ್ಯೆ ಹೆಚ್ಚು. ಈ ಸುರಕ್ಷತಾ ಕ್ರಮದ ಹೊರತಾಗಿ ಟ್ರಾಕ್ಮ್ಯಾನ್ಗಳು ಸಿಗ್ನಲ್ ಕುರಿತು ಎಚ್ಚರಿಕೆ ನೀಡಲು ಪಟಾಕಿಗಳನ್ನು ಬಳಕೆ ಮಾಡುವಂತೆ ಕೂಡ ಸೂಚಿಸಲಾಗಿದೆ. ಈ ಉದ್ದೇಶಕ್ಕಾಗಿ ಉತ್ತಮ ಗುಣಮಟ್ಟದ ಪಟಾಕಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.