ಪುರಿ (ಒಡಿಶಾ):ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಬಾಗಿಲು 46 ವರ್ಷದ ಬಳಿಕ ಮತ್ತೆ ಓಪನ್ ಆಗಿದೆ. ವಿಶೇಷ ಪೂಜೆಗಳನ್ನು ನೆರವೇರಿಸಿದ ಬಳಿಕ ಇಂದು ಮಧ್ಯಾಹ್ನ 1.28ಕ್ಕೆ ರಹಸ್ಯ ಕೊಠಡಿಯ ಬಾಗಿಲನ್ನು ತೆರೆಯಲಾಗಿದೆ. ಈ ಕಾರ್ಯದಲ್ಲಿ 11 ಮಂದಿ ಭಾಗವಹಿಸಿದ್ದಾರೆ ಎಂದು ಪುರಿ ಜಗನ್ನಾಥ ದೇವಸ್ಥಾನದ ಅಧಿಕಾರಿಗಳು ತಿಳಿಸಿದರು.
1978 ರಲ್ಲಿ ಕೊನೆಯದಾಗಿ ರತ್ನ ಭಂಡಾರದ ಬಾಗಿಲನ್ನು ತೆರೆಯಲಾಗಿತ್ತು. ಆ ಬಳಿಕ ಇಂದು ರತ್ನ ಭಂಡಾರದ ಬಾಗಿಲನ್ನು ತೆರೆಯಲಾಗಿದೆ. ಶ್ರೀಕ್ಷೇತ್ರದಲ್ಲಿ ಜಗನ್ನಾಥನಿಗೆ ವಿವಿಧ ಸೇವೆಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸೇವೆಗೆ ಅಡ್ಡಿಯಾಗದಂತೆ ರಹಸ್ಯ ಕೊಠಡಿಯನ್ನು ತೆರೆಯಲು ಅಧಿಕಾರಿಗಳು ಮುಂಚಿತವಾಗಿ ವ್ಯವಸ್ಥೆ ಮಾಡಿದ್ದರು. ರತ್ನ ಭಂಡಾರದಲ್ಲಿರುವ ಆಭರಣಗಳನ್ನು ಎಣಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಐದು ಮರದ ಪೆಟ್ಟಿಗೆಗಳಲ್ಲಿ ಆಭರಣಗಳು: ಪುರಿ ಜಗನ್ನಾಥನ ಆಭರಣಗಳನ್ನು ಐದು ಮರದ ಪೆಟ್ಟಿಗೆಗಳಲ್ಲಿ ಇರಿಸಿ ರಹಸ್ಯ ಕೋಣೆಯಲ್ಲಿ ಇರಿಸಲಾಗಿತ್ತು. ಈ ಹಿಂದೆ ಪ್ರತಿ ಮೂರು ಅಥವಾ ಐದು ವರ್ಷಗಳಿಗೊಮ್ಮೆ ಈ ಕೋಣೆಯ ಬಾಗಿಲು ತೆರೆದು ಸಂಪತ್ತಿನ ಲೆಕ್ಕಾಚಾರ ಮಾಡಲಾಗುತ್ತಿತ್ತು. ಕೊನೆಯ ಬಾರಿ 1978 ರಲ್ಲಿ ಎಣಿಕೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ನಲ್ಲಿ ದಾಖಲಾಗಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯ ಖಜಾನೆ ತೆರೆದು ಸಂಪತ್ತು ಎಣಿಕೆ ಮಾಡುವಂತೆ ಆದೇಶಿಸಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು. 2018ರಲ್ಲಿ, ನ್ಯಾಯಾಲಯಗಳು ಪುರಾತತ್ವ ಇಲಾಖೆಗೆ ಆದೇಶ ನೀಡಿದೆ. ರಹಸ್ಯ ಕೋಣೆಗಳು ಶಿಥಿಲಗೊಂಡು ಮಳೆ ನೀರಿನಿಂದ ಸೋರುತ್ತಿದೆ ಎಂದು ಹೇಳಲಾಗಿದೆ.
ಏಪ್ರಿಲ್ 6, 2019 ರಂದು, ನವೀನ್ ಪಟ್ನಾಯಕ್ ಸರ್ಕಾರವು ನೇಮಿಸಿದ 13 ಸದಸ್ಯರ ಅಧ್ಯಯನ ಸಮಿತಿಯು ಬಾಗಿಲು ತೆರೆಯಲು ಹೋದರು, ಆದರೆ ರಹಸ್ಯ ಕೊಠಡಿಯ ಕೀಲಿಯು ಕಾಣೆಯಾಗಿತ್ತು. ಸದಸ್ಯರು ಹಿಂತಿರುಗಿದ್ದರು. ನಂತರ, ದುರಸ್ತಿಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಅಧ್ಯಯನ ಮಾಡಲು ಸರ್ಕಾರ ನ್ಯಾಯಮೂರ್ತಿ ರಘುವೀರದಾಸ್ ಸಮಿತಿಯನ್ನು ನೇಮಿಸಿತು. ಇದೇ ವೇಳೆ ಪುರಿ ಕಲೆಕ್ಟರೇಟ್ ಖಜಾನೆಯಲ್ಲಿ ನಕಲಿ ಕೀ ಪತ್ತೆಯಾಗಿದೆ. ಇನ್ನೊಂದೆಡೆ ರಘುವೀರ್ ಸಮಿತಿ ವರದಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಅದನ್ನೇ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡಿದೆ.