ಕರ್ನಾಟಕ

karnataka

ETV Bharat / bharat

ಸಂಸತ್​ನಲ್ಲಿ ಸಂವಿಧಾನದ ಪ್ರತಿ ಪ್ರದರ್ಶನ; ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ - PRIYANKA GANDHI TAKES OATH

ಪ್ರಿಯಾಂಕಾ ಪ್ರಮಾಣವಚನ ಸಂದರ್ಭದಲ್ಲಿ ಸದನದಲ್ಲಿ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್​ ಗಾಂಧಿ ಕೂಡ ಹಾಜರಿದ್ದರು.

priyanka-gandhi-takes-oath-as-ls-mp-after-big-win-from-wayanad
ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ (IANS)

By PTI

Published : Nov 28, 2024, 12:43 PM IST

ನವದೆಹಲಿ:ಕೇರಳದ ವಯನಾಡು ಉಪಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ, ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.

52 ವರ್ಷದ ಪ್ರಿಯಾಂಕಾ ಪ್ರಮಾಣವಚನ ಸಂದರ್ಭದಲ್ಲಿ ಸದನದಲ್ಲಿ ರಾಜ್ಯಸಭಾ ಸದಸ್ಯೆಯೂ ಆಗಿರುವ ತಾಯಿ ಸೋನಿಯಾ ಗಾಂಧಿ ಮತ್ತು ಸಂಸದರಾಗಿರುವ ಸಹೋದರ ರಾಹುಲ್​ ಗಾಂಧಿ ಕೂಡ ಹಾಜರಿದ್ದರು. ಒಂದೇ ಕುಟುಂಬದ ಮೂವರು ಸದಸ್ಯರು ಸಂಸದರಾಗಿರುವ ಅಪರೂಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಕುಟುಂಬ ಸದಸ್ಯರೊಂದಿಗೆ ಕೇರಳ ಶೈಲಿಯ ಬಿಳಿ, ಚಿನ್ನದ ಅಂಚಿನ ಸೀರೆಯುಟ್ಟು ಸಂಸತ್ತಿಗೆ ಆಗಮಿಸಿದ ಅವರು, ಇಂದು ನನಗೆ ಖುಷಿಯಾಗಿರುವ ದಿನ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಸದನ ಆರಂಭವಾಗುತ್ತಿದ್ದಂತೆ ಸಂವಿಧಾನದ ಪ್ರತಿ ಹಿಡಿದುಕೊಂಡು ಹಿಂದಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ ನಾಂದೇಡ್​ ಉಪಚುನಾವಣೆಯಲ್ಲಿ ಗೆಲುವು ಸಾದಿಸಿದ ಕಾಂಗ್ರೆಸ್​ನ ರವೀಂದ್ರ ಚೌಹಾಣ್​ ಕೂಡ ಮರಾಠಿಯಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ತಂದೆ ವಸಂತ್​ರಾವ್​ ಚೌಹಾಣ್​ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಅವರು ಚುನಾವಣೆ ಎದುರಿಸಿದ್ದರು.

2019ರಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿರುವ ಪ್ರಿಯಾಂಕಾ, ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ರಾಜಕೀಯ ಜೀವನ ಆರಂಭವಾದ 5 ವರ್ಷಗಳ ಬಳಿಕ ಅವರು ಜನಪ್ರತಿನಿಧಿಯಾಗಿ ತಮ್ಮ ಪ್ರಯಾಣ ಶುರು ಮಾಡಿದ್ದಾರೆ. ಸಹೋದರ ರಾಹುಲ್​ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡು ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು.

ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಸೋಲಿನ ಸಂಕಷ್ಟದ ಸಮಯದಲ್ಲಿ ಅವರು ಸಂಸತ್​ ಪ್ರವೇಶಿಸಿದ್ದಾರೆ. ಪಕ್ಷಕ್ಕೆ ಪುನರ್​ಶಕ್ತಿ ತುಂಬುವಲ್ಲಿ ಅವರು ಪ್ರಮುಖ ಪಾತ್ರವಹಿಸಲಿದ್ದಾರೆಯೇ ಎಂಬ ಕುತೂಹಲ ಕಾಂಗ್ರೆಸ್ಸಿಗರಲ್ಲಿ ಮೂಡಿದೆ.

ಮಾತು ಮತ್ತು ನೋಟದಲ್ಲಿ ಅಜ್ಜಿ ಇಂದಿರಾ ಗಾಂಧಿಯ ಹೋಲಿಕೆಗಳಿಂದ ಮತದಾರರ ಗಮನ ಸೆಳೆಯುವ ಪ್ರಿಯಾಂಕಾ ತಮ್ಮ ಸಕ್ರಿಯ ರಾಜಕೀಯ ಜೀವನಕ್ಕೂ ಮುಂಚಿನಿಂದಲೂ ಅಂದರೆ 2004ರಿಂದ ತಾಯಿ ಸೋನಿಯಾ ಮತ್ತ ಸಹೋದರ ರಾಹುಲ್​ ಪರ ಪ್ರಚಾರ ನಡೆಸುತ್ತಿದ್ದಾರೆ.

ವಯನಾಡುವಿನಲ್ಲಿ ಉಪ ಚುನಾವಣೆ ಗೆದ್ದ ಹಿನ್ನೆಲೆ ಪಕ್ಷವು ಕಾಂಗ್ರೆಸ್​ ನಾಯಕರ ಸಮ್ಮುಖದಲ್ಲಿ ಬುಧವಾರ ಅವರಿಗೆ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿತು. ಶನಿವಾರ ನವೆಂಬರ್​ 23ರಂದು ಪ್ರಕಟವಾದ ಫಲಿತಾಂಶದಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ದಾಖಲೆ ಬರೆದರು.

ಇದನ್ನೂ ಓದಿ: ಜಾರ್ಖಂಡ್​ ಸಿಎಂ ಆಗಿ ಇಂದು ಹೇಮಂತ್ ಸೊರೇನ್​ ಪ್ರಮಾಣವಚನ; 'ಇಂಡಿಯಾ' ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಜ್ಜು

ABOUT THE AUTHOR

...view details